Tuesday, October 4, 2016

ನನ್ನ ಪ್ರೀತಿ ಹೀಗಿದೆ

                                     
ಪ್ರೀತಿಸಲಾರೆ,
ಅಲಂಕಾರಿಕ ಗುಲಾಬಿಯ
ಅಥವಾ
ಬೆಚ್ಚಗೆ ಹೂದಾನಿಯಲ್ಲಿ
ಕುಳಿತ ಹೂವ

ಪ್ರೀತಿಸುವೆ,
ಕೆಲವು ಕಪ್ಪು ವಿಚಾರವ
ಗುಟ್ಟಿನ ನೆರಳು
ಮತ್ತು
ಆತ್ಮದ ಸಂಬಂಧವ

ಪ್ರೀತಿಸುವೆ
ಚಿಗುರು ಚಿಗುರದ ಮರಗಳ
ನೆಲದಿಂದ ಎದ್ದುಬಂದು
ಆವರಿಸಿಕೊಂಡ
ನಿನ್ನ ದೇಹ ಪರಿಮಳವ

ಪ್ರೀತಿಸುವೆ,
ಯಾರು? ಎಲ್ಲಿ? ಯಾವಾಗ?
ಎಂದೆಲ್ಲಾ ಯೋಚಿಸದೆ
ಸ್ವಲ್ಪವೂ ಸಂಕೀರ್ಣತೆಯಿಲ್ಲದೆ
ಜಂಭವೂ ತೋರಿಸದೆ

ಪ್ರೀತಿಸುವುದೇ ಹೀಗೆ
ನನಗೇ ಗೊತ್ತಿಲ್ಲದೆ
ನಿನಗೇ ತಿಳಿಯದೆ

ಕವಿತೆ  ಇಂಗ್ಲಿಷ್ ಮೂಲ: ಪ್ರಬಲ್ಲೋ ನೆರೂಡ                

Thursday, August 4, 2016

ಬಟ್ಟೆ ಬದಲಾವಣೆ


ಅವಳನ್ನು ಮೊದಲ ವರ್ಷದ ಎಂಜಿನಿಯರಿಂಗ್ ಪದವಿಲಿ ಇರಬೇಕಾದರೆ ನೋಡಿದ್ದು. ಆಗ ಒಳ್ಳೆಯ ಸಂಪ್ರದಾಯದ ಕೂಸಿನ ತರ ಕಾಣುತ್ತಿದ್ದಳು. ಕೆಂಪು ಚೂಡಿದಾರದಲ್ಲಿ ಮಿಂಚುತ್ತಿದ್ದಳು. ಏಜ್ ಹುಡುಗಿಯರಿಗೆ ನಾವು ಮಾಡೆಲ್ ಹಾಗೆ ಕಾಣಬೇಕು ಅನ್ನೋ ಈ ಕಾಲದಲ್ಲಿ ಇವಳೊಂದು ಅಪವಾದ ಎಂದುಕೊಂಡಿದ್ದೆ. ಕಾಲೇಜಿನಲ್ಲಿ ನನಗೊಬ್ಬ ಹುಡುಗನ ಪರಿಚಯವಿತ್ತು. ಅವನಿಗೆ ಕಾಲೇಜಿನ ಹೆಚ್ಚಿನ ಹುಡುಗಿಯರ ಜಾತಕವೆಲ್ಲಾ ಗೊತ್ತಿರುತ್ತಿತ್ತು. ಅದಕ್ಕೆ ಅವನನ್ನು ಕಾಲೇಜಿನ ತುಂಬಾ  ಪುರೋಹಿತ ಎಂದೇ ಕರೆಯುತ್ತಿದ್ದರು. ಅವನಲ್ಲಿ "ಆ ಹುಡುಗಿಯ ಬಗ್ಗೆ ಗೊತ್ತಾ?" ಎಂದು ವಿಚಾರಿಸಿದೆ. ಅವನು "ಅವಳು ನೋಡಲು ಭಾರತೀಯ ನಾರಿ ಹಾಗಿದ್ದಾಳೆ, ಐ ಆಮ್ ನಾಟ್ ಇಂಟರೆಸ್ಟೆಡ್” ಅಂದಿದ್ದ. "ನಿನಗೆ ಸೆನ್ನಿಲಿಯೋನೆನೇ ಬೇಕೂಂತ ಕಾಣತ್ತೆ" ಎಂದು ಅವನಿಗೆ ತಮಾಷೆಗೆ ಹೇಳಿದ್ದೆ.

ಒಂದು ದಿನ ಅವಳ ಜೊತೆಗೆ ಅವಳ ಅಪ್ಪ ಅಮ್ಮ ಕಾಲೇಜಿನ ಆಫೀಸಿನ ಕಡೆಗೆ ಹೋಗುತ್ತಿರುವುದನ್ನು ನೋಡಿದೆ. ಅವರ ಒಟ್ಟಿಗೆ ಅವಳ ತಮ್ಮನೂ ಇದ್ದನು. ಆಕೆಯ ತಮ್ಮನ ಮುಖದಲ್ಲಿ ಸಿಡುಬು ರೀತಿಯ ಕಲೆಗಳಿದ್ದವು. ಅಪ್ಪನಿಗೆ ಅಷ್ಟೇನು ತುಂಬಾ ಪ್ರಾಯ ಆಗದಂತೆ ಕಂಡು ಬಂದರೂ ಅವರ ಬೆನ್ನು ವಯಸ್ಸಾದವರಂತೆ ಬಾಗಿತ್ತು. ಅವರ ಕಂಕುಳದಲ್ಲಿ ಬಿಳಿ ಬಣ್ಣದ ಜೋಳಿಗೆ ನೇಲುತ್ತಿತ್ತು. ಅದು ಧೂಳು ಹಿಡಿದು ಬಣ್ಣ  ಮಾಸಿತ್ತು. ಅವಳ ಅಮ್ಮನ ಕಣ್ಣುಗಳ ಅಂಚಲ್ಲಿ ಮುದುಕಿಯರ ರೀತಿ ಗುಳಿ ಬಿದ್ದಿತ್ತು. ಇವುಗಳೆಲ್ಲಾ ಅವಳ ಮನೆಯವರ ಆರ್ಥಿಕ ಮತ್ತು ದೈಹಿಕ ಬಡತನವನ್ನು ಹೇಳುತ್ತಿದ್ದವು.ಈ ಹಿಂದೆ ನಾನು ಯೋಚಿಸಿದ್ದ ಸಂಪ್ರದಾಯದ ಕೂಸಿನ ಅರ್ಥ ಬೇಡಬೇಡವೆಂದರೂ ಮನಸಿಗೆ ಬರುತ್ತಿತ್ತು.

ಆವತ್ತೇ ಸಂಜೆ ನನ್ನ ಕಾಲೇಜು ಬಿಟ್ಟ ತಕ್ಷಣ ರೂಮಿಗೆ ಬಂದು ಮಂಕು ಹಿಡಿದವನಂತೆ ಕುಳಿತು ಬಿಟ್ಟೆ. ನನ್ನ ರೂಮಿನಲ್ಲಿ ಹೆಚ್ಚು ಕಮ್ಮಿ ಎಂಟು ತಿಂಗಳಿನಿಂದ ತೊಳೆಯದೆ ಬಿದ್ದಿದ್ದ ಪ್ಯಾಂಟುಗಳು, ಶರ್ಟುಗಳು ಕಣ್ಣಿಗೆ ಕಂಡವು. ಅರೇ! ಈ ಹಿಂದೆ ಅವುಗಳು ಯಾಕೆ ನನಗೆ ಕಂಡಿರಲಿಲ್ಲ? ನಾನು ಯಾಕೆ ಅವುಗಳನ್ನು ಗಮನಿಸಿರಲಿಲ್ಲ?ರೂಮಿನ ಹಾಸಿಗೆಯ ಬೆಡ್ ಶೀಟಿಂದ ಯಾಕೋ ವಾಸನೆ ಬಂದ ಹಾಗಾಯಿತು. ನನ್ನ ಮನೆಯಲ್ಲಿ ನಾನು ಕೇಳಿದಷ್ಟು ದುಡ್ಡು ಕೊಟ್ಟರೂ ನನ್ನ ಕತೆ ಇಷ್ಟೇ ಅಲ್ವಾ....  ಇರುವ ವಸ್ತುಗಳನ್ನು ಸರಿಯಾಗಿ ಮೆಂಟೇನ್ ಮಾಡಲು ಬರುವುದಿಲ್ಲ ನನಗೆ. ಅವಳಾದರೂ ಪರ್ವಾಗಿಲ್ಲ. ಆ ಚೂಡಿದಾರ ಎಷ್ಟು ಚೆಂದಗೆ ಇದೆ, ನಿನ್ನೆ ಮೊನ್ನೆ ಖರೀದಿ ಮಾಡಿದ ಹಾಗೆ. ಮನಸಲ್ಲೇ  ಶ್ರೀಮಂತಿಕೆ ಮತ್ತು ಧರಿಸುವ ಬಟ್ಟೆಯನ್ನು ಸಮೀಕರಿಸಲು ಕಷ್ಟಪಟ್ಟೆ. ಇದೇ ಯೋಚನೆಯಲ್ಲಿ ನಾನು ಆ ರಾತ್ರಿ ಕಳೆದು ಹಗಲಾದರೂ ನಿದ್ದೆ ಮಾಡಿರಲಿಲ್ಲ.

ಪದವಿಯ ಮೂರು ವರ್ಷಗಳು ಕಳೆಯುತ್ತಾ ಬಂದವು. ಅವಳ ನೆನಪು ಮರೆತೇ ಹೋಗಿತ್ತು. ಆದರೆ ಓ... ಮೊನ್ನೆ ಪೇಟೆಗಂತ ಹೋದಾಗ ಅವಳು ಕಂಡಳು. ನನಗೆ ಶೇವಿಂಗ್ ಕ್ರೀಮ್ ಬೇಕಿತ್ತು. ಹಾಗಾಗಿ ನಾನು ಶಾಪಿಂಗ್ ಮಾರ್ಕೇಟ್ ಗೆ ಹೋಗಿದ್ದೆ. ಅವಳೂ ಕೂಡ ಏನೋ ಪರ್ಚೇಸ್ ಮಾಡಲು ಅಲ್ಲಿಗೆ ಬಂದಿದ್ದಳು. ಈಗ ಭಯಂಕರ ಬದಲಾಗಿ ಹೋಗಿದ್ದಳು ಆಕೆ.
ತೊಡೆಯ ಕಚ್ಚಿದ ನೀಲಿ ಜೀನ್ಸು ಮತ್ತು ಹಳದಿ ಟಿ- ಶರ್‍ಟು ಧರಿಸಿದ್ದಳು. ದೇಹದ ಅಂಗಾಗಳು ಕಾಣುವಂತಹ ಅವಳ ಡ್ರೆಸ್ನ ನೋಡಿ ಕೊಬ್ಬಿದ ಕಡವೆಯನ್ನು ಕಂಡಹಾಗಾಯ್ತು. ಎತ್ತರದ ಹೀಲ್ಸ್ ಚಪ್ಪಲಿ ಮೇಲೆ ರೋಮ್ಯಾಂಟಿಕ್ ಆಗಿ ನಿಂತಿದ್ದಳು.ಇವಳು ಮೊದಲ ವರ್‍ಶದ ಪದವಿಯಲ್ಲಿದ್ದಾಗ ನಾನು ನೋಡಿದ  ಹುಡುಗಿಯಾ?ಅವಳ ತುಟಿಯ ಬದಿಯಲ್ಲಿದ್ದ ಸಣ್ಣ ಕಪ್ಪು ಮಚ್ಚೆ ಇದು ಆ ಹುಡುಗಿಯೇ ಎಂದು ಗ್ಯಾರಂಟಿ ಮಾಡಿತು. ಮೊದಲೆಲ್ಲಾ ಅಪ್ಪನಿಗೆ ಸುಳ್ಳು ಕಾರಣಗಳನ್ನು ಕೊಟ್ಟು ನಾನು ದುಡ್ಡು ಕೇಳುತ್ತಿದ್ದೆ. ಆ ದುಡ್ಡಲ್ಲಿ ತಿಂಗಳಿಗೆ ಎಟ್ಲೀಸ್ಟ್ ಎರಡು ಪ್ರತಿ ಹೊಸ ಟ್ರೆಂಡಿನ ಶರ್ಟು, ಪ್ಯಾಂಟು ಪರ್‍ಚೇಸ್ ಮಾಡುತ್ತಿದ್ದೆ.  ಆವತ್ತು ನಾನು ಕಾಲೇಜಿನಲ್ಲಿ ಅವಳ ಫ್ಯಾಮಿಲಿಯನ್ನು ನೋಡಿದ ನಂತರ ನನ್ನಲ್ಲಿ ತುಂಬಾ ಬದಲಾವಣೆ ಆಗಿಹೋಯಿತು. ಆಮೇಲೆಲ್ಲಾ ಆರು ತಿಂಗಳಿಗೊಮ್ಮೆ ಬಟ್ಟೆ ಖರೀದಿಸಲು ಶುರುಮಾಡಿದೆ. ಈಗ ಅದೇ ಚೂಡಿದಾರದ ಹುಡುಗಿ, ಅದೇ ಭಾರತೀಯ ನಾರಿ; ಫಾರೇನರ್ಸ್ ತರ ಡ್ರೆಸ್ ಮಾಡಿರುವುದು ನೋಡಿ ನಾನು ದಂಗಾದೆ.

ಶೇವಿಂಗ್ ಕ್ರೀಮ್ ತೆಗ್ದುಕೊಳ್ಳಲು ಬಂದ ನಾನು ಪರ್ಚೇಸ್ ಮಾಡುವುದನ್ನು ಬಿಟ್ಟು ಅವಳನ್ನೇ ಅಚ್ಚರಿಯಿಂದ ನೋಡುತ್ತಾ ನಿಂತೆ. ಒಳ್ಳೇ ಗೌರಮ್ಮನ ತರ ಇದ್ದ ಅವಳು ಈಗ ಹೇಗೆ ಬದಲಾದಳು? ಇದರ ಹಿಂದಿರುವ ರಹಸ್ಯವಾದರೂ ಏನು? ಹೋಗ್ಲಿ ಅವಳಿಗೆ ಅವರ ಮನೆಯ ಬಡತನದ ನೆಂಪಾದರೂ ಉಂಟಾ? ಎಂದೆಲ್ಲಾ ಯೋಚಿಸುತ್ತಾ ನಿಂತೆ. ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಅವಳು ಕ್ಯಾರಿ ಬ್ಯಾಗಿನಲ್ಲಿ ಲಕ್ಸು ಸೋಪು, ಹೈರ್ ಕಲರ್, ಪಿಂಕು ನೈಲ್ ಪಾಲಿಶ್ ತುಂಬಿಸಿ ಕ್ಯಾಷ್ ಕೌಂಟರಿನ ಕಡೆಗೆ ಹೋದಳು. ನಾನು ಮೆಲ್ಲಗೆ ಅವಳನ್ನು ಹಿಂಬಾಲಿಸಿದೆ. ಅಲ್ಲಿ ನನಗೆ ಮತ್ತೊಂದು ಅಚ್ಚರಿ ಕಾಣ್ತು. ಆವತ್ತು ಅವಳ ನೋಡಿ ’ಐ ಆಮ್ ನಾಟ್ ಇಂಟರೆಸ್ಟೆಡ್’ ಎಂದಿದ್ದ ಆ ಪುರೋಹಿತ ಅವಳ ಖರೀದಿಯ ದುಡ್ಡನ್ನು ಕೊಡುತ್ತಿದ್ದ. ಆಮೇಲೆ ಅವರಿಬ್ಬರೂ ಒಬ್ಬರನ್ನೊಬ್ಬರು ಅಂಟಿಕೊಂಡು ಶಾಂಪಿಂಗ್ ಮಾರ್‍ಕೇಟ್ ನಿಂದ ಹೊರನಡೆದರು. ನಾನು ನಿಂತಲ್ಲೇ ನಿಂತಿದ್ದೆ.