Monday, June 8, 2015

ಬೇಟೆಗಾರಿಕೆ ಮುಂದೆ ಫ್ರೆಶ್ ಮಾಂಸ


ತಲೆಮೇಲೆ ಕೊಡೆ ಹಿಡಕೊಂಡಂತೆ ಚೆಂಬು ಗ್ರಾಮದ  ಸುತ್ತಲೂ ಗುಡ್ಡದ ದಿಬ್ಬಗಳಿವೆ. ಗುಡ್ಡವು ಕಾಡನ್ನು ಹೊದ್ದುಕೊಂಡಿದೆ. ಯುನೆಸ್ಕೊವು  ಕೊಡಗಿನ ಚೆಂಬು ಗ್ರಾಮದಲ್ಲಿ ಬರುವ ಅರಣ್ಯವನ್ನು  ಪಶ್ಚಿಮ ಘಟ್ಟಕ್ಕೆ ಸೇರಿಸಿ, ಶಾಶ್ವತ ಅಭಯಾರಣ್ಯವಾಗಿಸಬೇಕೆಂದಿದೆ. ಕೆಲವು ಅರಣ್ಯ ಪ್ರದೇಶವು ಆಗಲೇ ರಕ್ಷಿತಾರಣ್ಯವಾಗಿವೆ. ಅಂಥಾ ಘೋರ ಕಾಡು ಇಲ್ಲಿದೆ. ಮನೆಗಳು ಎಷ್ಟು ಭೂಭಾಗವನ್ನು ಆಲಿಂಗಿಸಿದೆಯೋ ಅದರ ಹತ್ತು ಪಟ್ಟು ದಟ್ಟ ಕಾಡು ಈ ಪ್ರದೇಶವನ್ನು ಹಬ್ಬಿದೆ! ಬಾಲ್ಯದಲ್ಲಿ ನನಗೆ ಅಲ್ಲಿ ಹುಲಿ ಹೋಯ್ತು, ಇಲ್ಲಿ  ಕಾಟಿ ಬಂತು, ಅಗೋ; ಹೆಬ್ಬಾವು, ಕರಿನಾಗರ, ಕಾಟಿಮುರ್ಕ[ ಕಾಳಿಂಗ ಹಾವು] ಎಂದೆಲ್ಲಾ ಮಾತುಗಳು  ಕಿವಿಗೆ ಬಿದ್ದಿದ್ದು ಮತ್ತು ಕೇಳಿದ್ದು ನೆನಪಿದೆ. ಒಮ್ಮೆ ನನ್ನ ಕಣ್ಣೆದುರಿಗೆ ದರ್ಪದಿಂದ ಸುಮಾರಾಗಿ ಐದುವರೆ ಅಡಿ ಎತ್ತರದ ಕಡವೆ ಕಂಡಿದ್ದು ನಿಜ. ಮಳೆಗಾಲದಲ್ಲಿ ಆನೆ; ತವರಿಗೆ ಬಂದ ಗರತಿಯಂತೆ ಈ ಊರಿಗೆ ಬರುತ್ತದೆ. ಒಂದ್ಸಾರಿ ನಾನೂ ಆನೆಯನ್ನು ಬೆಳ್ಳಂಬೆಳಗ್ಗೆ ನಮ್ಮ ತೋಟದಲ್ಲಿ ಕಂಡಿದ್ದು ನಿಜ.  ಹಳ್ಳಿಯ ಮಂದಿಯ ಕೈಗೆಟುಕುವ ಹಾಗೆ ಆನೆ, ಕಾಡು ಹಂದಿ,  ಕಾಡು ಪಾಪ, ಕಾಡು ಕೋಣ, ಮೊಲ, ಚಿರತೆ, ಕಡವೆ ಮತ್ತು ಕಾಡು ಕೋಳಿ ಮತ್ತು ಇನ್ನೂ ಹಲವು ಪ್ರಾಣಿಗಳು ಕಂಡುಬರುತ್ತವೆ. ಪಾಪ ಅವುಗಳಿಗೆ  ಕಾಡೋ... ನಾಡೋ... ಒಂದೂ ಗೊತ್ತಾಗದು.

   
     ಚಿಕ್ಕಮಗಳೂರಿನಲ್ಲಿ ನಾನು ಹೋಗುತ್ತಿರುವ ಮೆಸ್ ನಲ್ಲಿ ಮಾಂಸದ ಅಡುಗೆಯೂಟದ ಬೆಲೆಯನ್ನು ಏರಿಸಿದ್ದಾರೆ. 'ಯಾಕಂತ ರೇಟು ಸಡನ್ ಆಗಿ ಏರಿಸಿದ್ರಿ ಅಮ್ಮಾ...'   ಎಂದು ಅಡುಗೆಯವರಲ್ಲಿ ಕೇಳಿದೆ. 'ಈಗ ಮಾಂಸಕ್ಕೆ ರೇಟು ಜಾಸ್ತಿಯಾಗಿದೆ ಕಣಪ್ಪಾ... ಚಿಕನ್ ಗೆ ಕೆ.ಜಿಗೆ ಇಷ್ಟು, ಮಟನ್ ಗೆ ಕೆ.ಜಿಗೆ ಅಷ್ಟು' ಎಂದು ಲೆಕ್ಕ  ಹೇಳಿದರು. ಆಗ ಯೋಚನೆಗೆ ಬಂದಿದ್ದು ನನ್ನ ಗ್ರಾಮ. ನಮ್ಮ ಊರಿನ ಹಲವರು ಆಹಾರದಲ್ಲಿ ಅಚ್ಚ ಸ್ವಾವಲಂಬಿಗಳು. ನೆಂಟರು, ಗೆಳೆಯರು ಯಾರೆ ಬಂದರೂ ಅವರು ಮಾಂಸದ ಅಂಗಡಿಗೆ ಹೋಗುವುದಿಲ್ಲ. ಮಾಂಸದ ರೇಟು ಆಕಾಶ ಮುಟ್ಟಿದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಮಾಂಸದಡುಗೆಯು ತುಂಬಾ ಸಾವಯಾವದ್ದಾಗಿರುತ್ತದೆ ಮತ್ತು ಫ್ರೆಶ್ ಆಗಿರುತ್ತದೆ. ಅಡುಗೆಗೆ ಬೇಕಾದ ಮಾಂಸವನ್ನು ಕಾಡೇ ಒಪ್ಪಿಸುತ್ತದೆ. ಕಾಡಿನ ಪ್ರಾಣಿಯ ಮಾಂಸದ ಸ್ವಾದವೇ ಬೇರೆ, ಎಂದು ಅವರು ಬೇಟೆಯನ್ನು ಮಾಡುತ್ತಾರೆ. ಇಲ್ಲಿನ ಹಾಡಿಯ ಹೆಚ್ಚಿನ ಮನೆಯಲ್ಲೂ ಬಿದಿರಿನ ಬಿಲ್ಲುಗಳಿವೆ; ಇವುಗಳು ಹಕ್ಕಿಗಳನ್ನು ಹೊಡೆಯಲು ಬಳಸುತ್ತಾರೆ. ನಾಡಕೋವಿಯಿದೆ; ಇದು ಪ್ರಾಣಿಗಳ ಹೊಡೆಯಲು  ಬಳಸುತ್ತಾರೆ. ಕೆಲವರು ಉರುಳು ಎನ್ನುವ ಸಾಧನ ಉಪಯೋಗಿಸುತ್ತಾರೆ.
   
   
      ನಮ್ಮ ತೋಟದ  ಒಂದು ಕಡೆ ಕಾಡು ಹಂದಿ ಬರುವ ಜಾಗವಿದೆ.  ಆ ಜಾಗದಲ್ಲಿ  ಮಾತ್ರವೇ ಹಂದಿ ಬರುವುದು. ಆ ಜಾಗಕ್ಕೆ ಉರುಳು ಕಟ್ಟಿಡಲು ಊರಿನ ಅನೇಕರು ಬರುತ್ತಾರೆ. ಕಾಡು ಹಂದಿ ಮಾಂಸ ಬಲು ರುಚಿಯಂತೆ. ಅಪರೂಪದ ಚಿಪ್ಪು ಹಂದಿ, ಕಾಡು ಪಾಂಜ ಮೊದಲಾದವುಗಳ ಮಾಂಸ ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಚಿಪ್ಪು ಹಂದಿಯ ಮಾಂಸವಂತೂ ಯೋಚಿಸಿ ಬಾಯಲ್ಲಿ ನೀರು ಸುರಿಸುತ್ತಾರೆ.

 
      ಬೇಟೆಯಾಟದ ನಡುವೆ ಅರಣ್ಯದ ಕುಡಿಗಳಾದ ಅಪರೂಪದ ಪ್ರಾಣಿತಳಿಗಳು ನಶಿಸುತ್ತಿರುವುದರ ಬಗ್ಗೆ ಯಾರೂ ಚಿಂತೆ ಮಾಡುವುದಿಲ್ಲ.  ಕಂಡ ಕಂಡ ದಾರಿಯಲ್ಲಿ ಕೋವಿ ಕಟ್ಟಿ ಇಡುವುದರಿಂದ ಮನುಷ್ಯನ ಜೀವಕ್ಕೂ ಅಪಾಯವೆ. ಮನುಷ್ಯ; ತಾವೇ ಸಾಕಿದ ಪ್ರಾಣಿಯನ್ನು ತಿನ್ನುವುದಲ್ಲಿ ತಪ್ಪಿಲ್ಲ. ಆದರೆ, ತಮ್ಮ ಅಧಿಕಾರದ ಮಿತಿಗೂ ಬಾರದ ಅರಣ್ಯವಾಸಿ ಜೀವಗಳನ್ನು ತಿನ್ನುವುದು ಎಷ್ಟಕ್ಕೆ ಸರಿ?

No comments:

Post a Comment