Monday, May 4, 2015

ನನ್ನ ಹಳ್ಳಿಯ ಕಲಾವಿದರು ರಾಜ್ಯವನ್ನು ಕಂಡಾಗ !

ಯಶಸ್ವಿ ಯುವಕ ಮಂಡಲ -ಚೆಂಬು ಗ್ರಾಮದ ಒಂದು ಯುವಕರ ತಂಡ. ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ ಈ ಯುವಕ ತಂಡದಲ್ಲಿ ಸುಮಾರು ಹನ್ನೆರಡು ಜನ ಯುವಕರಿರುವರು. ಇದರಲ್ಲಿ ತಂಡಕ್ಕೆ ಸಕ್ರೀಯವಾಗಿ ತೊಡಗಿರುವುದು ಆರು- ಏಳು ಮಂದಿ ಮಾತ್ರ. ಮೊದಲು ಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರವೇ ತಮ್ಮ ಕಲಾ ಪ್ರದರ್ಶನ ಮಾಡುತ್ತಿತ್ತು, ಯಶಸ್ವಿ ಯುವಕರ ಗುಂಪು. ಭಜನಾ ನೃತ್ಯ, ಕೋಲಾಟ, ವೀರಗಾಸೆ, ಅರೆ ಕನ್ನಡ ಮತ್ತು ತುಳು ನಾಟಕ, ಪ್ರಹಸನ, ಬೆಲ್ಜಪ್ಪ, ಕೊರಗ, ಕಂಗೀಲು, ಆಟಿ ಕಳಂಜ ನೃತ್ಯ ಮತ್ತು ಭೂತ ಕೋಲ ಮೊದಲಾದ ಕಲಾ ಪ್ರಕಾರಗಳನ್ನು ನನ್ನ ಊರಿನಲ್ಲಿ ಮತ್ತು ಪಕ್ಕದ ಊರುಗಳಲ್ಲಿ ಪ್ರಸ್ತುತ ಪಡಿಸುತ್ತಿತ್ತು, ಈ  ಗ್ರಾಮೀಣ ಕಲಾತಂಡ. ಹಾಗೆಯೇ ಊರಿನ ಜನಮೆಚ್ಚುಗೆಯನ್ನು ಕೂಡ ಗಳಿಸಿತ್ತು. ಇವರಲ್ಲಿ ಭೂತ ಕೋಲದ ನೃತ್ಯವು ತುಂಬಾ ಗಮನ ಸೆಳೆಯುತ್ತದೆ ಜೊತೆಗೆ ಮೈನವಿರೆಬ್ಬಿಸುತ್ತದೆ.

        ಊರಿನ ಜನರು ತುಂಬಾ ಸಂಕೋಚದ ಗುಣ ಹೊಂದಿರುವರು. ಶೈಕ್ಷಣಿಕವಾಗಿ ಹೆಚ್ಚಿಗೆ ಏನೂ ಮುಂದುವರಿದಿಲ್ಲದ ನನ್ನ ಗ್ರಾಮಸ್ತರು ಶ್ರಮವಂತ ಕೃಷಿ ಕೆಲಸಗಾರರು. ಇವರಿಗೆ ತಮ್ಮ ಊರೇ ಸ್ವರ್ಗ.  ತಮ್ಮ ಊರುಬಿಟ್ಟು  ಪಕ್ಕದ ಪೇಟೆಯಾದ ಮಡಿಕೇರಿ, ಸುಳ್ಯಕ್ಕೂ ಕಾಲಿಡದವರೂ ಇದ್ದಾರೆ! ಯಶಸ್ವಿ ಕಲಾತಂಡದ ಯುವಕರಿಗೆ ತಮ್ಮ ಊರಲ್ಲಿ ಕಲಾಪ್ರದರ್ಶನ ನೀಡಿ ನೀಡಿ ಬೇಜಾರಾಗಿತ್ತು.  ದೂರದ ಊರುಗಳಲ್ಲಿ ತಮ್ಮ ಕಲೆಯನ್ನು ತೋರಿಸಬೇಕೆಂದು ಅಪಾರ ಆಸೆಯಿದ್ದರೂ ಊರಿನ ಹಿರಿಯರ ಪ್ರೋತ್ಸಾಹ ಹಾಗೂ ಧನ ಸಹಾಯ ಅಷ್ಟಾಗಿ ಸಿಗಲಿಲ್ಲ. ಈ ಸಮಯದಲ್ಲಿ ಧರ್ಮಸ್ಥಳ ಸಂಘ, ಸ್ತ್ರಿ ಶಕ್ತಿ ಗುಂಪು ಮೊದಲಾದ ಸಂಘಗಳಿಗೆ ಆರ್ಥಿಕ ಸಹಕಾರಕ್ಕಾಗಿ ಮೊರೆಹೋದರು, ಕಲಾಯುವಕರು. ಯುವಕ ತಂಡದಲ್ಲಿ ಸ್ವಲ್ಪ ಮಂದಿಯ ಹೊರತಾಗಿ ಮಿಕ್ಕವರು;  ಅತ್ಯಂತ ಬಡವರೂ,  ರೋಗ ಹಿಡಿದ ಮನೆಮಂದಿಯನ್ನು ಹೊಂದಿದವರು, ಪೋಲಿಗಳು, ಕುಡುಕರು, ಸಿಡುಕರು ಇನ್ನೂ ಹಲವು ಚಟವಂತರೂ ಇದ್ದರು. ಇವರ ಎಲ್ಲಾ ಗುಣಗಳ ಮೇರೆಗೆ ಊರಿನವರು ಇವರನ್ನು ಸ್ವಲ್ಪ ತಾರತಮ್ಯವನ್ನೇ ಮಾಡುತ್ತಿದ್ದರು ಅನ್ನಿ. ಆದರೆ ಅದ್ಭುತ ಗ್ರಾಮೀಣ ಕಲಾವಿದರಿವರು ಎಂಬುವುದರಲ್ಲಿ ಮತ್ತೆರಡು ಮಾತಿಲ್ಲ.  ಇಂಥ ಯುವಕರನ್ನು ಹೆಚ್ಚುಕಮ್ಮಿ ಸದ್ಗುಣಸಂಪನ್ನರಾಗಿ ಮಾಡಿದ್ದು, ದರ್ಮಸ್ಥಳ ಸಂಘದವರು ನಡೆಸಿದ್ದ -ಮದ್ಯ ವರ್ಜ್ಯನ ಶಿಬಿರ ಮತ್ತು ಭಜನೆಯ ತರಬೇತಿ.

        ನಾವು ಹಳ್ಳಿಯಲ್ಲೇ ಕಲಾಪ್ರದರ್ಶನ ಕೊಟ್ಟರೆ ಒಂದು ರೀತಿಯಲ್ಲಿ ಬಾವಿಯೊಳಗಿನ ಕಪ್ಪೆಯ ಕುಣಿತದಂತೆ, ಎಂದು ಮನಗಂಡರು ಯಶಸ್ವಿ ಯುವಕರು.  ಅದೆಷ್ಟೇ ಖರ್ಚು ಬೀಳಲಿ ಸಾಲ- ಸೂಲ ಮಾಡಿದರೂ ಪರವಾಗಿಲ್ಲ ದೂರದೂರಿಗೆ, ಬೇರೆ ಜಿಲ್ಲೆಗಳಿಗೆ ಹೋಗಿ, ಅಲ್ಲಿ ನಮ್ಮ ಕಲೆಯನ್ನು ತೋರಿಸಿ ಎಲ್ಲರಿಂದ ಭೇಷ್ ಅನ್ನಿಸಿಕೊಳ್ಳೆಲೇಬೇಕು, ನಮ್ಮೂರಿನ  ತಂಡವು ದೊಡ್ಡ ಹೆಸರು ಮಾಡಬೇಕು, ನಮ್ಮ ಯುವಕತನದ ಹಸಿಬಿಸಿ ಕೆಚ್ಚನ್ನು ಕಲೆಯ ಮೂಲಕ  ತೋರಿಸಬೇಕೆಂಬ ಭಯಂಕರ ಛಲ ಮೂಡಿಯೇ ಬಿಟ್ಟಿತು, ಕಲಾ ಯುವಕರಿಗೆ. ಒಂದು ದಿನ ಈ ಯಶಸ್ವಿ ಯುವಕಮಂಡಲ 'ಯುವಜನೋತ್ಸವ' ದಲ್ಲಿ ಅವಕಾಶ ಪಡೆದೇಬಿಟ್ಟಿತು. ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದ್ದ ಯುವಜನೋತ್ಸವ. ಅಲ್ಲಿ ನನ್ನೂರಿನ ಯುವಕರು ಛಲವನ್ನು ಪಣವಾಗಿಟ್ಟು ತಮ್ಮ ಕಲೆಯನ್ನು ಸೇರಿದ್ದ ಕಲಾರಸಿಕರ ಮುಂದೆ ಸಾದರಪಡಿಸಿದರು. ತಮ್ಮ ಭೂತ ಕೋಲದ ನೃತ್ಯವು ಅಪಾರ ಜನಮೆಚ್ಚುಗೆ ಗಳಿಸಿತು. ಅಮೇಲೆ ಈ ತಂಡವು ಹಿಂತಿರುಗಿ ನೋಡಲೇ ಇಲ್ಲ. ಪುತ್ತೂರಿನಲ್ಲಿ, ಮಂಗಳೂರಿನ ಕೆಲವೆಡೆ ಪ್ರದರ್ಶನ ಕೊಟ್ಟ ಕಲಾತಂಡದ ಹಳ್ಳಿಯ ಯುವಕರಿಗೆ ಜಿಲ್ಲೆಯ ತುಂಬಾ ಅಭಿಮಾನಿಗಳೂ ಹುಟ್ಟಿಕೊಂಡರು...... (ಮುಂದುವರಿಸುತ್ತೇನೆ)