Wednesday, November 26, 2014

ಆಸೆಗೆ ಎನಿತು ಕೊನೆ?


- ಅಕ್ಷಯ ಕಾಂತಬೈಲು
ಒಮ್ಮೆ ನೆನಪಿಸಿಕೊಳ್ಳಿ. ನಾವೆಲ್ಲರೂ ಬಾಲ್ಯದಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಅಪ್ಪನ ಕೈಬೆರಳೊತ್ತುತ್ತಾ, ಅಮ್ಮನ ಸೆರಗ ಜಗ್ಗುತ್ತಾ ‘ನಂಗೆ ಅದು ತೆಗೆದುಕೊಡು… ಇದು ತೆಗೆದುಕೊಡು…’ ಎಂದು ಮಿಠಾಯಿ, ಆಟಿಕೆ ಅಥವಾ ಇನ್ನಾವುದೋ ಆಸೆಯಲ್ಲಿ ರಂಪ ಮಾಡಿ ಕೇಳಿರುತ್ತೇವೆ. ಆಸೆ ಬೇಡ ಎಂದವರಾರು? ಬೇಕು ಎಂದವರಾರು? ಅದು ರಕ್ತಗತವಾಗಿ ಬಂದಿರುವಂಥದ್ದು ಅಲ್ಲವೇ. ಹುಟ್ಟಿದ ಹಿಳ್ಳೆ ಕೂಡ ಬದುಕಿಗಾಗಿ ಆಸೆಯಿಂದ- ಅಮ್ಮನ ಮೊಲೆ ಚೀಪಿ, ಹಾಲು ಹೀರಿ ಹಸಿವು ನೀಗಿಸಿಕೊಳ್ಳುತ್ತೆ. ಹೀಗೆ ಚಿಕ್ಕಂದಿನಲ್ಲೇ ಬೇರುಬಿಡುವ ಆಸೆಯ ಆಯಸ್ಸು ತುಂಬಾ ದೀರ್ಘ. ನಾವು ಬೆಳೆದಂತೆಲ್ಲಾ ನಮಗೇ ಗೊತ್ತಿಲ್ಲದಂತೆ ಆಸೆಯೂ ಬೆಳೆಯುತ್ತಾ ಹೋಗುತ್ತಿರುತ್ತದೆ.
     ಹರೆಯದ ಕಲರ್ ಕಲರ್ ಆಸೆಗಳು ಯಾರಿಗೆ ಬಂದಿಲ್ಲ ಹೇಳಿ; ಶಾಂಪಿಂಗ್ ಹೋಗಿ ಚೆಂದದೊಂದು ಬಟ್ಟೆ ಕೊಳ್ಳುವುದು, ಹುಡುಗನಾದರೆ ಹುಡುಗಿಗೆ ಹಾಗೆಯೇ ಹುಡುಗಿಯಾದರೆ ಹುಡುಗನಿಗೆ ಲೈನು ಹೊಡೆಯುವುದು, ಸಿನಿಮಾ ನೋಡುವುದು, ವಾಹನದ ಮೇಲೆ ಸವಾರಿ ಹೋಗುವುದು ಆಹಾ! ಎಂತೆಂಥಾ ಭಯಂಕರ ಆಸೆಗಳು ಆವಾಗ. ಕೆಲವು ಬಾರಿ ಆಸೆಗಳೇ ಆಸಕ್ತಿಯಾಗಿರುತ್ತದೆ ಎಂಬುವುದು ಒಪ್ಪಿಕೊಳ್ಳಲೇಬೇಕಾದ ವಿಚಾರ. ನಮ್ಮ ಓದು ಒಂದು ಹಂತ ತಲುಪಿದಾಗ ಜಾಬಿನ ಆಸೆಗಾಗಿ ನಾವೆಷ್ಟು ತಲೆಕೆಡಿಸಿಕೊಂಡಿರುತ್ತೇವೆಂದು ಆ ದೇವನೇ ಬಲ್ಲ. ಇದು ಆಸೆಯ ತುತ್ತತುದಿಯೋ ಏನೋ… ಇಂಟರೆಸ್ಟಿಂಗ್ ವಿಷಯವೆಂದರೆ ಆಗಷ್ಟೇ ಅರೇಂಜ್ ಮದುವೆಯಾದ ನವದಂಪತಿಗಳು ಸಾಮಾನ್ಯವಾಗಿ ಮೊದಲು ಮಾತನಾಡುವುದು; ತಮ್ಮ ತಮ್ಮ ಆಸೆ ಆಸಕ್ತಿಗಳ ಬಗ್ಗೆಯೇ.

‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಮಹಾತ್ಮ ಅಂದರೂ ಆಸೆಯಿಲ್ಲದಿದ್ದರೆ ಅದೂ ದುಃಖಕ್ಕೆ ಮೂಲವಾದೀತು. ಜೀವನದ ಮೇಲಿನ ಆಸೆ ಕಳೆದು ಜಿಗುಪ್ಸೆಗೊಂಡು ಜೀವವನ್ನೇ ಕಳೆದುಕೊಳ್ಳುವವರನ್ನು, ಓಡಿ ಹೋಗುವವರನ್ನು ಯೋಚಿಸಿದರೆ ಸಂಕಟವಾಗುತ್ತೆ. ಆಯಸ್ಸು ಹಿರಿದಾದಂತೆಲ್ಲಾ ಆಸೆಯೆಂಬ ಬೆಟ್ಟಗಳು ಒಂದೊಂದಾಗಿ ಕರಗುತ್ತಾ ಬಂದು ಬಂದೂ ನೆಲಮಟ್ಟ ತಲುಪುವುದು ಪ್ರಕೃತಿ ನಿಯಮ ಬಿಡಿ.

          ಸಾಮಾನ್ಯವಾಗಿ ಹೇಳುವ ಮಾತು -ಆಸೆ ಮಾಡಿ ಕೆಟ್ಟ. ಈ ಮಾತು ಸತ್ಯ ಎನ್ನುವಂತೆ ರಾಜಕಾರಣಿಗಳು/ ಉನ್ನತ ಹುದ್ದೆಯಲ್ಲಿರುವ ಸಮಾಜದ ‘ದೊಡ’್ಡ ಮನುಷ್ಯರು ಭ್ರಷ್ಟಾಚಾರ, ಅಕ್ರಮ ಆಸ್ಥಿ ಗಳಿಕೆ ಮಾಡಿ ಸಿಕ್ಕಿಬಿದ್ದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬೇಕಾದಷ್ಟಿದೆ. ಮನುಷ್ಯನಿಗೆ ಆಸೆಗಳೇ ಬದುಕಾಗಬಾರದು. ಬದುಕಲು ಆಸೆಗಳು ಬೇಕು ಅಷ್ಟೆ, ಬದುಕಲು ಬೇಕಾಗಿರುವ ಆಸೆಗಳು ಯಾವ ನೆಲೆಯಲ್ಲಿದೆ -ಧನಾತ್ಮಕವೋ… ಋಣಾತ್ಮಕವೋ ಎಂದು ಯೋಚಿಸಬೇಕಾಗಿದೆ. ಒಂದಂತೂ ನಿಜ ನಮ್ಮ ಆಸೆಗಳಿಗೆ ಲಗಾಮು ಹಾಕದಿದ್ದರೆ; ಇಂದಿನ ಕಾಲದಲ್ಲಿ ಕಿಸೆ ಖಾಲಿಯಾದೀತು, ಸಂಸಾರ ಬಿರುಕುಬಿಟ್ಟೀತು, ಬೀದಿಗೆ ಬೀಳಬೇಕಾಗಬಹುದು ಜೋಕೆ! ಅದಕ್ಕೆ ದೊಡ್ಡೋರು ಹೇಳಿದ್ದು ‘ಹಾಸಿಗೆ ಇದ್ದಷ್ಟು ಮಾತ್ರವೇ ಕಾಲುಚಾಚು’, ‘ಅತಿ ಆಸೆ ಗತಿಗೇಡು’ ಎಂಬುವುದಾಗಿ.

No comments:

Post a Comment