Tuesday, September 9, 2014

ನನ್ನೂರಿನ ಕವಯಿ'ತ್ರಿ'ಯರು

ಮಡಿಕೇರಿ ತಾಲ್ಲೂಕಿನ ದೊಡ್ಡ ಗ್ರಾಮ 'ಚೆಂಬು'. ಬಹು ಕಲೆಗಳಿಂದ ತುಂಬಿದ ಚೆಂಬಿದು. ಕಲಾಪ್ರಕಾರ ಯಾವುದೇ ಇರಲಿ ಒಬ್ಬ ನಿದರ್ಶನ ಈ ಊರಲ್ಲಿ ಸಿಗುತ್ತಾರೆ.  ಯಕ್ಷಗಾನ, ನಾಟ್ಯ, ಸಂಗೀತ, ಜನಪದ ಕುಣಿತ, ಸಾಹಿತ್ಯ ಇಂತಿಪ್ಪ  ಕಲೆಗಳ ಉಸಿರಾಡುತ್ತಿದೆ ನನ್ನೂರು. ಸಾಹಿತಿಗಳರಸಿ ಊರು ಸುತ್ತೋಣ ಬನ್ನಿ- ಮೂವರೂ ಬರಹಗಾರ್ತಿಯರು ನನ್ನೂರಿಗೆ ಕೊಂಡುತಂದವರಾದರೂ ತಮ್ಮದೇ ಶೈಲಿಯ ಸಾಹಿತ್ಯದಿಂದ ಊರು ಕೊಂಡಾಡುತ್ತಿದೆ. ನಾಡಿನ ಹೆಸರಾಂತ  ಪತ್ರಿಕೆಗಳಲ್ಲಿ ಇವರುಗಳ ಹೆಸರುಗಳು ತಮ್ಮ ಬರಹದೊಂದಿಗೆ ನಮ್ಮೂರಿನ ಹೆಸರೂ ಅಚ್ಚಾಗುತ್ತಿದೆ. ಅವರನ್ನು, ಅವರ ಸಾಧನೆಯನ್ನು ನನ್ನಿಂದಾದಷ್ಟು ಪರಿಚಯಿಸುವ ಪುಟ್ಟ ಪ್ರಯತ್ನ ಇಲ್ಲಿದೆ.

ಸಹನಾ ಕಾಂತಬೈಲು: 'ಕಾಂತಬೈಲು' ಚೆಂಬುಗ್ರಾಮದ ಪುಟ್ಟ ಹಳ್ಳಿ ದಟ್ಟ ಹಸಿರಿನ ಸೊಬಗು ಇಲ್ಲಿ, ಇಲ್ಲಿನ ಸಹನಾರು  ತಮ್ಮ ಹನಿ ಕವಿತೆಯಿಂದ ಸಾಹಿತ್ಯಜೀವನ ಆರಂಭಿಸಿದವರು. ನಾನು ಕಂಡಹಾಗೆ  ಇವರ ಆದಿಯ  ಹನಿಗವನಳಲ್ಲಿ -ಮುಗ್ಧಪ್ರೀತಿ, ಏಕಾಂತತೆ, ವಿರಹ, ಪ್ರಣಯ ಎಲ್ಲವುದರ ಜೊತೆ ಪ್ರಾಸಬದ್ಧತೆ ವಿಶೇಷವಾದದ್ದು.
         
          ಕೇವಲ ಪಿ.ಯು.ಸಿಗೆ ಮುಗಿಸಿದ ಓದು. ತನ್ನ ೧೭ ನೇ ಕಿರು ವಯಸ್ಸಿಗೇ ಮದುವೆಯಾದವರು ಪುಟ್ಟ ಸಹನಾ. ೨೦ ನೇ ಹರೆಯದಲ್ಲೇ -ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರ ದಲ್ಲಿ ಹನಿಗವಿತೆಗಳು ಪ್ರಕಟಿಸಲ್ಪಟ್ಟವು. ಚುಟುಕಿನಲ್ಲಿ ನಡೆದ ಹಾದಿಯಲ್ಲಿ ಇವರಿಗೆ ಸಿಕ್ಕ ಅತೀ ದೊಡ್ಡ ಪುರಸ್ಕಾರ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ  ಪ್ರತಿಷ್ಟಿತ'ಚುಟುಕು ಶ್ರೀ'  ಪ್ರಶಸ್ತಿ.  ತನ್ನ ಮನೆಯಲ್ಲಿ ಕರೆಂಟಿನ ಸವಲತ್ತು,  ವಾಹನ ಸವಲತ್ತು, ಸಂಸಾರದ ಹೊರೆ ಇವಗಳಾವು ಭಾದಿಸದೇ ತಾನಿರುವಿಕೆನ್ನೇ ಪ್ರೀತಿಸಿ ಎಂಟು ಕಿಲೋಮೀಟರು ಸವೆಸಿ ದೂರದ ಅಂಚೆ ಕಚೇರಿಗೆ  ಹೋಗಿ ಬರವಣಿಗೆ ಪೋಸ್ಟು ಮಾಡುತ್ತಿದ್ದಳು. ಹಳ್ಳಿಯೇ ಬೆನ್ನೆಲು ಎಂಬ ಪ್ರಗತಿಶೀಲ ಭಾರತದಲ್ಲಿ ಕಾಂತಬೈಲು ಹಳ್ಳಿಗೆ ಇನ್ನೂ ಬಸ್ಸು ಸವಲತ್ತಿಲ್ಲ. ಬಾಡಿಗೆ ಜೀಪಿನಲ್ಲಿ ಹೋಗಿ ಅದೇ ಎಂಟು ಕಿಲೋಮೀಟರ್ ಸವೆದು 'ನನ್ನಮ್ಮ'  ಸೈಬರಿಗೆ ಹೋಗಿ ಮೇಲ್ ಮಾಡುತ್ತಾಳೆ. ಹೇಳಿದಹಾಗೆ ಈ ಊರಿಗೆ ಮೊಬೈಲ್ ನೆಟ್ವರ್ಕ್ ಎಲ್ಲಾ ಕಡೆ ಚಾಚಿಲ್ಲ.  ಅರಣ್ಯ ಶೋಭೆಯ ಕೊಡಗಿನ  ಹಳ್ಳಿಗಳಲ್ಲಿ ಮರ ಬೀಳುವುದು ಸಾಮಾನ್ಯ ಹಾಗಂತ ನೆಲ ತೋಡಿ ಫೋನು ಕೇಬಲ್ ಹಾಕಬಹುದಿತ್ತು. ನೆಟ್ವರ್ಕ್ ಶಾಪ ಇರುವ ಈ ಊರಿಗೆ, ಸರಕಾರದಿಂದ ಪ್ರತೀ ಮನೆಗೂ ಹಾಕಿಸಿದ ತಂತಿರಹಿತ ವಿಲ್ ಫೋನು ಶೋಕೇಸಿನಲ್ಲಿ ಇಡಲು ಲಾಯಕ್ಕಾಗಿದೆ. ಅದಾವುದಕ್ಕೂ ಈಕೆ ಜಗ್ಗಿಲ್ಲ.

            ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆ ಶಿವಮೊಗ್ಗೆಯಲ್ಲಿ  ನಡೆದ ಸಮ್ಮೇಳನದಲ್ಲಿ ಭಾಗವಹಿಸಿರುವರು. ಕೃಷಿಯ ನೆಚ್ಚಿಕೊಂಡ ಮನೆ ತನ್ನದಾಗಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಒಲವಿತ್ತು ಮುಂದೆ ಕೃಷಿಲೇಖನವನ್ನೇ ತನ್ನ ಬರವಣಿಗೆಯಲ್ಲಿ ಬೆರೆಸಿದಳು ಸುಮಾರು ೬೦ಕ್ಕೂ ಮಿಕ್ಕಿ ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಪ್ರಜಾವಾಣಿಯಲ್ಲಿ ಬರೆದಿರುವರು, ಇನ್ನೂ ಬರೆಯತ್ತಲೇ ಇರುವ ಈಕೆಯ ನಾಡುಕಂಡತಹ ಕೆಲವೇ ಕೆಲವು ಕೃಷಿಬರಹಗಾರ್ತಿಯಲ್ಲಿ ಒಬ್ಬಳು. ಪುಟ್ಟ ಹಳ್ಳಿಯಲ್ಲಿರುವ ಸಹನಾ ಕಾಂತಬೈಲು ಕರ್ನಾಟಕ ರಾಜ್ಯದಾದ್ಯಂತ ಹಲವಾರು ನೈಜ ಅಭಿಮಾನಿ ಬಳಗ  ಹೊಂದಿದ್ದಾರೆ. ಆದಿಯಲ್ಲಿ ಕವಯಿತ್ರಿಯಾಗಿದ್ದ ಸಹನಾ, ಇವರ ಕೃಷಿ ಲೇಖನಗಳಿಗೆ ಇಂದು ಸಹಜ ಬೇಡಿಕೆಗಳಿವೆ.

ಇವರ ಒಂದು ಹನಿಗವಿತೆಯ ಝಲಕ್

ಸಾಹಿತಿ ಆಗಬೇಕೆಂದು
ನನಗಿತ್ತು ಮಹದಾಸೆ
ಸಾ 'ಸ' ಆಗಿ
'ಹಿ' ಮಾಯವಾಗಿ
'ತಿ' ಉಳಿದು
ನಾನಾದದ್ದು ಸತಿ
ಸ್ಮಿತಾ ಅಮೃತರಾಜ್: ನಮ್ಮೂರಿನ ಶಿರ ಭಾಗದಲ್ಲಿರುವ, ಇಂದು ಕೊಡಗಿನ  ಸಾಹಿತ್ಯಸಮಾಜದಲ್ಲಿ ಕೇಳಿಬರುತ್ತಿರುವ ಹೆಸರು 'ಸ್ಮಿತಾ ಅಮೃತರಾಜ್'. ತಮ್ಮ ಸಣ್ಣ ವಯಸ್ಸಿಗೇ ಹಲವು ಹೆಸರಾಂತ ಪತ್ರಿಕೆಗಳಲ್ಲಿ ಕವಿತೆ ಮತ್ತು ಪ್ರಬಂಧಗಳು ಪ್ರಕಟವಾಗುತ್ತಿವೆ.

          ಮಡಿಕೇರಿಯಲ್ಲಿ ಮೊನ್ನೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಎರಡನೇಯ ಕವನ ಸಂಕಲನ 'ತುಟಿಯಂಚಿನಲ್ಲಿ ಉಲಿದ ಕವಿತೆಗಳು' ಬಿಡುಗಡೆಗೊಳಿಸಿರುವರು. ಇವರ ಮೊದಲ ಕವನ ಸಂಕಲನ -ಕಾಲ ಕಾಯುವುದಿಲ್ಲ. ಪ್ರಕೃತಿಯ ಬರ ನಮ್ಮೂರಿನಲ್ಲಿಲ್ಲದ ಕಾರಣ ಎಲ್ಲಾ ಇವರ ಕವಿತೆಗಳು ಪ್ರಾಕೃತಿಕ ಸೊಬಗಿನ ಜೊತೆ ಜೀವನದ ಆಗುಹೋಗುಗಳ ಸಮ್ಮಿಲನದ ಭರಪೂರ ಮಿಶ್ರಣ. ಕೃಷಿ ಅವಲಂಬನೆಯ ಮನೆಯ ಬಿಗು ವಾತಾವರಣದಲ್ಲಿ ಇವರು ಕತ್ತಿ ಹಿಡಿದು ಕೆಲಸ ಮಾಡುತ್ತಾರೆ. ನಾಡಿನ ಸಾಹಿತ್ಯ ಕುಡಿಯಾದ ಇವರು ಹುಲ್ಲು ಹೊರೆಯ ಮುಡಿಗಿಟ್ಟು ನಡೆಯುವ ಗರತಿ. ಕೊಡಗು ಜಿಲ್ಲೆಯ ಸಾಹಿತ್ಯ ಪರಿಷತ್ನಲ್ಲಿ ಇರುವ ಸ್ಮಿತಾ ಅಮೃತರಾಜ್ ಸಾಹಿತ್ಯವನ್ನೇ ತನ್ನ ಉಸಿರಾಗಿಸಿಕೊಂಡವರು. ನಾನು ಕಂಡಂತೆ ಇವರ ಪ್ರಬಂಧ ಬಾಲ್ಯದ ನೆನಪು, ಪರಿಸಿರ-ಪರಿಕರಗಳನ್ನು ಹೆಚ್ಚು ತೋರಿಸುತ್ತದೆ. ಇವರು ಭವಿಷ್ಯದಲ್ಲಿ  ನಾಡಿನ ಬಹುದೊಡ್ಡ ಸಾಹಿತಿಯಾಗುವುದರಲ್ಲಿ ಸಂಶಯವಿಲ್ಲ.

ಇವರ ಒಂದು ಕವಿತೆಯ ಕೊಂಡಿ

ಆಗಲೇ ಕಂಡಿದ್ದು
ಮಂಚದ ಅಂಚಿನಲ್ಲಿ
ಕಿಲುಬು ಹಿಡಿದು ಕುಳಿತ
ಕಂಚಿನ ದೀಪ

ಬೆಳ್ಳಗೆ ಉಜ್ಜೆ ಹೊಳಪೇರಿಸಿ
ನಡುಕೋಣೆಯಲ್ಲಿ ಕುಳ್ಳಿರಿಸಿದ್ದೇನೆ
ಕರೆಂಟು ಕೈ ಕೊಟ್ಟಾಗಲಾದರೂ ಬೆಳಕಿಗೆ
ಇಲ್ಲದಿದ್ದರೆ ಯಥಾ ಪ್ರಕಾರ ಶೋಕಿಗೆ


ಸಂಗೀತ ರವಿರಾಜ್: ನಮ್ಮೂರ ಹೃದಯ ಭಾಗದಲ್ಲಿರುವ ಇವರು ಉತ್ತಮ ಕವಯಿತ್ರಿ. 'ನನ್ನೊಡಲ ಮಿಹಿರ' ಇವರ ಮೊದಲ ಕವನ ಸಂಕಲನ. ಚಿಕ್ಕ ವಯಸ್ಸಿಗೆ ಪ್ರಭುದ್ಧ, ಮೇರು ಕವನಗಳನ್ನು ಬರೆಯುವ ಇವರು ನಮ್ಮ ಕೊಡಗು ಕಂಡಂತಹ ಸಾಹಿತಿ. ಹಲವು ಹೆಸರಾಂತ ಪತ್ರಿಕೆಗಳಲ್ಲಿ ಇವರು ಬರೆದ ಕವಿತೆಗಳು ಮೂಡಿವೆ. ನಾನು ಕಂಡಂತೆ ಕವಿತಾವಸ್ತು -ಜೀವನ, ಬೆಳವಣಿಗೆ ಜೊತೆ ಚಿಂತನೆಯ ಸಮ್ಮಿಲನ ಪ್ರತೀ ಕವತೆಗಳಲ್ಲಿ ವ್ಯಕ್ತವಾಗುತ್ತದೆ. ಮಡಿಕೇರಿಯಲ್ಲಿ ನಡೆದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದ ಹೆಮ್ಮೆ ಇವರದು. ಸಾಹಿತ್ಯದಲ್ಲಿ ಇವಾಗಲೇ ಬೆಳೆದಿರುವ ಇವರು ಮುಂದೆ ಉತ್ತಮ ಸಾಹಿತಿಯಾಗುವುದರಲ್ಲಿ ಎರಡು ಮಾತಿಲ್ಲ.

ಇವರ ಒಂದು ಕವಿತೆಯ ಕೊಂಡಿ

ಮನಸಿನೊಳಗಣ ಒದ್ದೆಗೆ
ತೀವ್ರವಾಗಿ ಬದುಕಿ ತೋರಿಸುತ್ತಿರುವ
ಅತ್ಯಂತ ಹೀನ ನೋವುಗಳ
ದಟ್ಟಡವಿಯು ಬಯಸುತ್ತಿದೆ
ಜಡಿಮಳೆಯ ಸೊಗಸು...
ನೋವ ತೇಯ್ದ ಹಂಬಲ,
ಬರಿದು ಭಾವದ ನೆಲ
ಮನಸ್ಸು ಮಣ್ಣಿನಂತೆ.                                                      ಸ್ಮಿತಾ ಅಮೃತರಾಜ್ ಮತ್ತು ನಾನು
 
                       

2 comments:

  1. Marakini Narayana MoorthyOctober 1, 2014 at 12:23 AM

    Sakhi lli ambagambaga kandubappa hesaruga . Kruthichawrya maadi sikkibidda ondu janavuu ningala uurindu alladaa .

    ReplyDelete