Sunday, September 28, 2014

ಮನೆಯ ಮುದ್ದೆಗೆ ಬಿದ್ದ ಒಂದು ತೂತ
ಈಗತಾನೆ ಮುಗಿಯಿತು ಕುರುಕ್ಷೇತ್ರ. ಮನಸ್ಸುಬಿಚ್ಚಿ ನಿಮ್ಮ ಬಳಿ ಹೇಳುವೆ; ಜನಸಂಖ್ಯೆ ಏರುಹತ್ತಿದ ಈ ಕಾಲದಲ್ಲಿ ಒಂದು ಮನೆಗೆ ಇಬ್ಬರು ಮಕ್ಕಳು ಅಂದ ಹಾಗೆ ಒಂದು ಮನೆಗೆ ಒಬ್ಬ ಸಾಹಿತಿ ಸಾಕಪ್ಪ. ಉಳಿದವರು ಬೇರೆ ಯಾವುದೇ ಉದ್ಯೋಗದಲ್ಲಿ ತೊಡಗಿದರೆ ಪರವಾಗಿಲ್ಲ ಅವರನ್ನು ಡೈವರ್ಟ್ ಮಾಡದಿರಿ ದಯಮಾಡಿ. ಆದರೆ ನಮ್ಮ ಮನೆಯಲ್ಲಿ ದೇವರೇ.... ಅಮ್ಮ ನಾನು ಇಬ್ಬರೂ ಸಾಹಿತ್ಯ ಆರಾಧಕರು. ಸಿಕ್ಕಾಸಿಕ್ಕ ಸಮಯವೆಲ್ಲಾ ದನಿಗೂಡಿಗೆ ಆರಾಮಿಸಲೂ ಬಿಡದೆ ಕಾದಾಡುತ್ತೇವೆ. ಕಾದಾಟದಲ್ಲಿ ಸಾಹಿತ್ಯ, ಜನರಲ್ ನಾಲೆಡ್ಜು ಹಾಳು- ಮೂಳು ಎಲ್ಲಾ ಸಾದಾ ಗರಿಗರಿಯಾಗಿ ಮೇಲೇಳುತ್ತಿರುತ್ತವೆ, ಇಲ್ಲಿ ಯಾವುದೇ ವಿಚಾರಗಳಿಗೆ ಸಾವೆಂಬುವುದೇ ಇಲ್ಲ ಆ ವಿಚಾರ ಮುತ್ತಜ್ಜನ ಓಬಿರಾಯನ ಕಾಲದ್ದೇ ಇರಲಿ.  ಬಾಯಿ ಜಗಳದಲ್ಲಿ ಯಾರಿದ್ದು ಮೇಲುಗೈ ಎಂದರೆ ನನ್ನದೇ ಎಂದು ನಾನು, ನನ್ನದೇ ಎಂದು ಅವಳು ಒಟ್ಟಾರೆ  ಇಬ್ಬರೂ ಬಿಟ್ಟುಕೊಡಲು ತಯಾರಿಲ್ಲ, ಬಿಟ್ಟುಕೊಟ್ಟರೂ 'ನಿನ್ನ ನೋಡಿ ಪಾಪ ಅಂತ ಅನ್ನಿಸಿತು ಹೋಗು ಕನ್ನಡಿಲಿ ಮುಖ ನೋಡಿ ಬಾ...' ಎಂದು ಉರಿಸುವುದು. ಮಾತಿನ  ಮಾರಾಮರಿಯ ನಡುವೆ ಯಾರಾದರು ತೀರ್ಪುಗಾರರು  ಇದ್ದರೆ ಚೆಂದ. ನಂಗೊಮ್ಮೊಮ್ಮೆ ಅನಿಸುವುದುಂಟು ಬಾಯಿ ಬಡಿಯಲೆಂದೇ ಧರೆಗುರುಳಿ ಬಂದೆನೇನೋ... ಆಕೆಯದ್ದು ಬೇರೆ ಹಳೆಯ ತಲೆ ಒಮ್ಮೆ ಬಾಯಿ ಬಡಿಯುವಿಕೆ ಸ್ಟಾರ್ಟ್ ಆಯಿತು ಅಂತಾದರೆ ಸುಖಾಸುಮ್ಮನೆ ಎಲ್ಲೆಲ್ಲಾ ಹತ್ತಿಸಿಕೊಂಡು ಮೂಲೆಯಲ್ಲಿ ಬಾಯಿಮುಚ್ಚಿ, ತುಟಿಯೊತ್ತಿ ಇದ್ದ ನನ್ನ ಮೇಲೆ ಡ್ರೈವ್ ಮಾಡೋದ್ರಲ್ಲಿ ಏನು ಪಡೆಯುತ್ತಾಳೋ ಈ ತಾಯಿ.... ನಾನು ಮೊಬೈಲು ತೆಗೆಯಲಾರೆ ಎನ್ನುತ್ತಲೇ ಸುಮಾರು ೫ ವರ್ಷಗಳ ಕೆಳಗೆ ಮೊಬೈಲು ಖರೀದಿಸಿದಳು. ಲ್ಯಾಪುಟಾಪು ತೆಗೆದರೆ ಕಣ್ಣು ಹಾಳು ಎಂದಾಕೆ ಅದನ್ನೂ ಖರೀದಿಸಿ ತದ ವರುಷಗಳ ನಂತರ ಕನ್ನಡಕ ಧಾರಿಣಿಯೂ ಆದಳು!.


'ನಂಗೆ ಅದು ಬೇಡ ಇದು ಬೇಡ ಎಂದು  ಎಲ್ಲವನ್ನೂ ಮಾಡುತ್ತೀಯ  ಅಮ್ಮ.... ಹಾಗಾದರೆ ನಂಗೆ ಬೇಕು ಅನ್ನೋದು ಮಾಡಲು ಬಿಡು'  ಈ ರೀತಿ ನನ್ನ ಮಾತು ಸ್ಟ್ರಾಂಗು ಕೀ ಪಾಂಯಿಟ್ ಹಿಡಿದು ಶುರುವಿಟ್ಟರೆ

'ನಿಂಗೆ ಏನು ಬೇಕಾದರು ಮಾಡಲು ಬಿಟ್ಟಿದ್ದೇ ಜಾಸ್ತಿ ಆಗಿದ್ದು' ಆಕೆ.
'ಏನು ಬೇಕಾದರೂ ಅಂದ್ರೆ.... ನಾನು ಬೇಡವಾಗಿದ್ದು ಏನು ಮಾಡಿರುವೆ?'
'ಮಾಡಿರುವೆಯಲ್ಲಾ ಅಮ್ಮನಿಗೇ ಎದುರು ಮಾತನಾಡುತ್ತಿರುವುದು ನೋಡು ಈಗ '

'ನಂಗೆ 'ಅಮ್ಮ' ಅನ್ನುವುದು ಪದವಷ್ಟೇ... ನೀನು ಹೆತ್ತಿದ  ಪ್ರೀತಿಯ ಕುಡಿಯಷ್ಟೆ!  ಮುಂದೆ ನೀನು ಹೇಳುವ  ಹಿಸ್ಟರಿ, ಪುರಾಣ, ಪುರಾವೆ ನಂಗೆ ಬೇಡ ಆಮೇಲೆ 'ಅಮ್ಮ' ಅನ್ನುವುದಕ್ಕೆ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಭಾವಿಸುದೂ ಬೇಡ' ಹೌದು ನೀವು ಯೋಚಿಸಿದಂತೆ ನನ್ನದು ಮಾತಿನ ಟ್ರ್ಯಾಕ್ ತಪ್ಪಿತ್ತು....

ಕೇವಲ ಅಮ್ಮನ  ಜೊತೆಯಷ್ಟೇ ಅಲ್ಲ...  ಎಷ್ಟೇ ನಾಜೂಕಾಗಿ ಮಾತುಕತೆ ನಡೆಸಿದರೂ ಕೊನೆಗೆ ನನ್ನ ಮಾತು ಸರಿಕಂಡಿಲ್ಲವೆಂದಾದರೆ ತುಂಬಾ ಪಶ್ಚಾತಾಪ ಪಟ್ಟುಕೊಳ್ಳುವೆ. ಈ ಲೇಖನ ಬರೆದಾಗಲು ಅನ್ನಿಸುತ್ತಿದೆ ಮಾತಿನ ಮಾರಾಮರಿಯಲ್ಲಿ ನಾನು ಹಾಗೆ ಮಾತನಾಡಬಾರದಾಗಿತ್ತು ಛೆ...! ಇದು  ಮನೆಯ ಮುದ್ದೆಗೆ ಬಿದ್ದ ಒಂದು ತೂತಷ್ಟೆ... ಎಂದುಕೊಂಡಿದ್ದೇನೆ.
   

2 comments:

  1. Chennagide swalpa hosadu agide,swgtha ,maneya mathina varase chenngide ottinalli

    ReplyDelete
    Replies
    1. ಆತ್ಮೀಯ ಧನ್ಯವಾದಗಳು ವೀಣಾ.

      Delete