Saturday, September 13, 2014

ನಂಗೊಪ್ಪುವ ನಾಮಕರಣ ಮಾಡಿ

ನನ್ನ ಗೆಳೆಯ ಹೇಳಲೇಬೇಕಾದಷ್ಟು ಪ್ರತಿಭಾನ್ವಿತ. ನಂಗೊತ್ತು ನಾವಿಬ್ಬರೂ ಏಕಾಂತಕ್ಕೆ ಹೋಗುವುದು -ನಮಗೆ ನಿಲುಕದಷ್ಟು ಹೆಸರು ಬಾರದಿರುವಾಗ. 'ಅಲ್ಲ ಕಣೋ... ನಾನು ಓದಿನ ಜೊತೆಗೆ ಹೆಂಗೋ ಸಾವರಿಸಿಕೊಂಡು ರಂಗಕಲೆ ಕಲಿತು ರಾಷ್ಟ್ರೀಯ ನಾಟಕ ಶಾಲೆಯಲ್ಲಿ(ಎನ್.ಎಸ್.ಡಿ) ಅವಕಾಶ  ಗಿಟ್ಟಿಸಿಕೊಂಡರೂ  ನಂಗೆ ಹೆಸರು ಬಂದಿಲ್ಲ. ಇವಾಗ ಸ್ವಂತ ನಾಟಕ ತಂಡ ಬೆನ್ನಿಗಿಟ್ಟುಕೊಂಡರೂ  ಬೀದಿನಾಟಕ ಮಾಡೋ ಪರಿಸ್ಥಿತಿ!' ಗೆಳೆಯನ ಮಾತು ನನಗೂ ಕೆಲವೊಂದು ವಿಚಾರಗಳಲ್ಲಿ ಸಮೀಪ ಅನ್ನಿಸಿ ಆರ್ದ್ರಗೊಂಡಿದ್ದೆ. ಹೀಗೆ ನಮ್ಮ- ನಿಮ್ಮಗಳ ನಡುವೆ  ಇರುವ ಮುಸುಕುಪ್ರತಿಭೆಗಳು ಅವೆಷ್ಟು. ದೇವರ ಸೃಷ್ಟಿಯ ಜೀವದ ಗಂಟುಗಳಿಗೆ ಹೀಗಾದರೆ, ನಮ್ಮ ಮೈಮನ ತಣಿಸುವ ಪ್ರಾಕೃತಿಕ  ವಸ್ತುವಾಗಲಿ, ಧೂಳು ಹಿಡಿಸಿಕೊಂಡ ಮನುಷ್ಯಸೃಷ್ಟಿಯ ವಸ್ತುಗಳಾಗಲಿ -ಅವೆಷ್ಟು ಕೊರಗಬೇಡ ಹೇಳಿ. ಈ ವಿಚಾರದಲ್ಲಿ ಸಾಮ್ಯತೆಯಾಗಿ ಕಾಣಿಸಿದುದು ಜಲಪಾತಗಳು.

         
            ಗೊತ್ತಿರುವಂತೆ -ಜಲಲ ಜಲಲ ಜಲಧಾರೆ... ಗೀತೆ ಮೂಡಿಸಬಲ್ಲ ನಾಡಿನ ಜಲಪಾತಗಳೆಂದರೆ ನೆನಪಾಗುವುದು  ಜೋಗ, ಶಿವನ ಸಮುದ್ರ, ಅಬ್ಬೆ, ಚುಕ್ಕಿ ಫಾಲ್ಸ್ ಹೀಗೆ. ಚಾರಣದ ಗೀಳಿಟ್ಟುಕೊಂಡವರು ಕೊಲಂಬಾಸನಂತೆ  ಬೆಟ್ಟ-ಗುಡ್ಡ ಸುತ್ತುಹಾಕಿದರೆ ನಮ್ಮ ಕೊಡಗು ಜಿಲ್ಲೆಯಲ್ಲಿ ಸಿಗುವಷ್ಟು  ಅಡಗುಜಲಪಾತಗಳು  ಯಾವುದೇ ಜಿಲ್ಲೆಯಲ್ಲಿ ಸಿಗಲಾರೆದೆಂದು ನಿಸ್ಸಂಕೋಚವಾಗಿ ಛಾಲೆಂಜ್ ಮಾಡುವೆ!. ಕೊಡಗಿನಲ್ಲಿ ಕಾಣಬಹುದು ಛೋಟು ಜಲಧಾರೆಗಳು, ಪ್ರಾಕೃತಿಕ ಹಿನ್ನಲೆಯಲ್ಲಿ ಅದೊಂದು ಸೊಗಸು. ಕಾಣಬಹುದು ಬಾನಂಗಳದಿಂದ ಧರೆಗಿಳಿಯುವ ಜಲಧಾರೆಗಳು, ಇದೊಂದು ಸೊಗಸು. ನೋವೆಂದರೆ ಈ ಕಾಡುಜಲಪಾತಗಳ ಮೇಲೆ ಬೆಳಕು ಬೀಳದಿರುವುದು, ತನಗೊಂದು ಹೆಸರಿಲ್ಲದಿರುವಿಕೆ. ಆದರೆ ಇವು ಕೂಡ ಕಲ್ಲುಬಂಡೆಯ ಎದೆಯಲಿ ನೀರಧಾರೆಯನ್ನು ಹರಿಸಿ ತನ್ನ ವೀಕ್ಷಕರ ದೃಷ್ಟಿಗೆ; ಹೆಣ್ಣು ಅರೆ-ಬರೆ ಸಾರಿ ಉಟ್ಟಂತೆ, ಬಳುಕುವ ನಡುವಂತೆ, ಜಿಗಿಯುವ ಚಿಗರೆಯಂತೆ, ಓಡುವ ಕಾಲುಗಳಂತೆ ಇನ್ನೇನೋ ಅಂತೆ ಕಾಣಿಸಬಹುದು ಹಾಗೆ ನೋಡುವ  ಮನಸ್ಸಿರಬೇಕಷ್ಟೆ... ನನ್ನೂರಲ್ಲೂ ಹಲವು ನಿಗೂಢಜಲಪಾತಗಳಿವೆ. ಇವು ತಾನೂ ನಾಡಿನಲ್ಲಿ ಗುರುತಿಸಿಕೊಳ್ಳಬೇಕೆಂದು ಹಂಬಲಿಸುತ್ತಿವೆ...
ನಿನ್ನ ಹಂಬಲಿಕೆಗೊಂದು ಹನಿ ಕವಿತೆ;

ಬಾಗದಿರು ಡೊಂಕದಿರು
ಸುಮ್ಮನೆ ಹರಿದು
ಕೋರೆಬಂಡೆಗೆ
ಬೋಳುಬೆನ್ನೊಡ್ಡುವೆನೆಂದು
ನಿಜ ನೀನೊಂದು ಹೆಣ್ಣಾದರೆ
ಸೋಗಸಿಗೆ ಬಂಧಿ
ಇರುವ ನಗ್ನತೆಯಲ್ಲಿ ಸುಖಿಸು.

         
            ಕಾಂತಬೈಲು, ನಮ್ಮ ಮನೆಯ ಸುತ್ತಲೂ ರಕ್ಷಿತಾರಣ್ಯ. ಯಾರು ಈ ಜಲಪಾತದ ಇರುವಿಕೆಯನ್ನು ಸಂಶೋಧಿಸಿದರೋ ನಂಗೊತ್ತಿಲ್ಲ. ಮಡಿಕೇರಿಯಿಂದ ಸುಳ್ಯ ನಡುವೆ ಸಿಗುವ ಕಲ್ಲುಗುಂಡಿಯೆಂಬ ಚಿಕ್ಕ ಪಟ್ಟಣದಲ್ಲಿ ಚೆಂಬು ಗ್ರಾಮಕ್ಕೆ ತಿರುಗಿ ಕಾಂತಬೈಲು  ತಲುಪಿ.  ಹಳ್ಳಿರಸ್ತೆಯಿಂದ ಸುಮಾರಾಗಿ ಅರ್ಧ ಪರ್ಲಾಂಗು ಕಾಡಿನ ವಕ್ರ-ವಕ್ರ ಹಾದಿಯಾಗೆ ನಡೆಯಬೇಕು, ನಡೆಯಲ್ಲಿ ಆನೆ,  ಚುಕ್ಕಿ ಚಿರತೆ, ಕಾಡುಕೋಳಿ ಇನ್ನೂ ಕೆಲವು ಜೀವಗಳು  ನಿಮ್ಮನ್ನು ಇದಿರುಗೊಳ್ಳಬಹುದು ಹುಷಾರು!. ಮಳೆಗಾಲದ ಶುರು ಇಂಬಳ ಸಿಕ್ಕಾಪಟ್ಟೆ ಇರುತ್ತೆ ನೋಡಿ. ಹಾಗಾಗಿ ಮಳೆಕೊನೆಗೆ ಚಾರಣ ಮಾಡುವುದು ಸೂಕ್ತ. ನಿಸರ್ಗದೋಳಗೆ ಅಡಗಿರುವ ಕಾಂತಬೈಲಿನ ಈ ಫಾಲ್ಸ್ಗೆ ಇನ್ನೂ ನಾಮಕರಣವಾಗಿಲ್ಲ. ಬಂಡೆಯ ಮೇಲೆ ನೀರು ನಾಲ್ಕು ಕವಲುಗಳಾಗಿ ಧುಮ್ಮಿಕ್ಕುತ್ತದೆ. ಸುಮಾರಾಗಿ ೪೦ ಅಡಿಯ ಜಲಧಾರೆ. ಇಲ್ಲಿ ಯಾವುದೇ ಭಯವಿಲ್ಲದೆ ಜಲಕ್ರೀಡೆಯಾಡಬಹುದು. ಎಷ್ಟು ಬೇಕಾದರೂ ಚೀರಬಹುದು. ಕುಣಿದು-ಕುಪ್ಪಳಿಸಲೂಬಹುದು. 'ನಂಗೆ ಇನ್ನೂ ಹೆಸರು ಬಂದಿಲ್ಲ'ವೆಂಬ ಜಲಧಾರೆಯ ಕೂಗು ನಿಮಗೂ ಕೇಳಿಸಬಹುದು. ನಮ್ಮ ಮನೆಗೆ ಬಂದ ನೆಂಟರಾಗಲಿ, ಸ್ನೇಹಿತರೇ ಇರಲಿ ಮೊದಲು ಹೋಗುವುದೇ ಪಕ್ಕದಲ್ಲಿರುವ ಈ ಜಲಪಾತದ ಸುಖ-ದುಃಖ ವಿಚಾರಿಸಲು ಅವರಿಗೆ ಕಾಲದ ಲೆಕ್ಕವಿಲ್ಲ. ನೀರಾರಿ ಬೋಳುಬಂಡೆಗಲ್ಲ ನೋಡಿಯಾದರು ಖುಷಿ ಪಟ್ಟುಕೊಳ್ಳುತ್ತಾರೆ. ನನ್ನನ್ನು  ಡಾ. ರಹಮತ್ ತರೀಕೆರೆ, ಹಿರಿಯ ಸಾಹಿತಿ ಶಾಂತರಾಮ ಸೋಮಯಾಜಿ ಇನ್ನೂ ಹಲವು ಗಣ್ಯರು ನೋಡಬಂದಿರುವರೆಂದು ಜಲಧಾರೆ ಬಿಂಕದಿಂದ ಧ್ವನಿಸುತ್ತೆ. ಹೆಸರಿಲ್ಲದ ಕಾಂತಬೈಲಿನ ಝುರಿ, ನಿಮ್ಮ ಬರುವಿಕೆಯನ್ನು ಕಾಯುತ್ತಲಿದೆ... ಒಮ್ಮೆ ಬನ್ನಿ ನಂಗೊಪ್ಪುವ ನಾಮಕರಣ ಮಾಡಿ ಅನ್ನುತ್ತಿದೆ...


                                           ಜಲಪಾತಕ್ಕೆ ಕಲ್ಲುಗುಂಡಿ ಪೇಟೆಯಿಂದ ಡಾಂಬರು ಹಾದಿ.

                                           ಜಲಪಾತ ತಲುಪಲು ಅರ್ಧ ಕಿ.ಮೀ. ಕಾಡ ದಾರಿ.

ಕಾಂತಬೈಲಿನ ಅಡಗು ಜಲಪಾತದ ನೋಟ. 

4 comments:

 1. ಇಂತಹ ಜಲಪಾತಗಳು ಮನುಷ್ಯನಿಂದ ದೂರ ಇದ್ದರೆ ಮಾತ್ರ ತಮ್ಮನ್ನು ತಾವು ಉಳಿಸಿಕೊಳ್ಳಬಹುದು. ಹೆಸರಿಲ್ಲದಿದ್ದರೇನು.. ಮಳೆಹನಿಗಳಿಗೆ ಹೆಸರಿಟ್ಟವರಿದ್ದಾರೆಯೇ..

  ReplyDelete
  Replies
  1. ondarthalli ninga heludu nijave. illi aanu manushyange saamyavagi nodidde, haange ondu dina sayalebeku!

   Delete
 2. Hi Akshay ! I am a blogger too! Visit www.sesamehalvah.com. My suggestion to your blog is add a translator to it so that other language people can also read and get more popularity.

  ReplyDelete
  Replies
  1. thanks dear Mohanan Kulathummulayil. here one problem can't get hold as mother tongue. translator difficult to translate especially for kannada local word(traditional).

   Delete