Wednesday, November 26, 2014

ಪ್ರೀತಿಸಿ ಬಿದ್ದ ಯುವಜನರೇ ಭೇಷ್!: ಅಕ್ಷಯ ಕಾಂತಬೈಲು

                
ಪ್ರೀತ್ಸೇ… ಪ್ರೀತ್ಸೇ… ಕಣ್ಣುಮುಚ್ಚಿ ನನ್ನೆ ಪ್ರೀತ್ಸೆ ಎಂಬ ಹಾಡಿನಂದದಿ ಪ್ರೀತಿಸಿ ಬಿದ್ದ ಯುವಜನರೇ ನಿಜಕ್ಕೂ ನೀವೇ ಭೇಷ್! ಯಾಕೆ ಗೊತ್ತುಂಟಾ; ಕೆಲವರಿಗೆ ಆ ಸುಖ ಮತ್ತು ಯಾತನೆ ಲಭಿಸಿಲ್ಲ. ಪ್ರೇಮ ಜೀವನವ ಸಾಂಗವಾಗಿ ನಡೆಸುತ್ತಿರುವಾಗ ಹಠಾತ್ತನೆ ಯಾವುದೋ ಒಂದು ಕಾರಣಕ್ಕೆ ನೀವು -ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟರೆಂದು ದೇವದಾಸನ ಥರ ಆಗಿ, ಆಕಾಶವೇ ಹರಿದುಬಿತ್ತು ಅಂದುಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಅರ್ಧಕ್ಕೆ ನಿಲ್ಲಿಸುವುದು, ಬೇರೆಯಾಗಿ ಬಿಟ್ಟೆವು ಎಂದು ಜೀವನದಲ್ಲಿಯೇ ಜಿಗುಪ್ಸೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗುವುದು, ಕೊನೆಗೊಂಡ ಪ್ರೇಮವ ಮರೆಯಲು ಹೆಂಡದ ಸಹವಾಸ ಮತ್ತು ಧೂಮಪಾನ ಮಾಡುವುದು, ಮಾರಕ ಡ್ರಗ್ಸ್ ಚಟ ಬೆಳೆಸಿಕೊಳ್ಳುವುದು ಇಂಥ ಸಮಾಜಬಾಹಿರ ಕೃತ್ಯಗಳನ್ನು ಮಾಡಿ ನಿಮ್ಮ ಅಮೂಲ್ಯವಾದ ಜೀವನಕ್ಕೆ ನೀವೇ ಬೆಂಕಿ ಹಾಕದಿರಿ. ನಿಮ್ಮನ್ನು ಬಿಟ್ಟು ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಹಾಗೆಯೇ ನಿಮ್ಮ ಭಗ್ನಗೊಂಡ ಪ್ರೇಮ ಕೂಡ ಶಾಶ್ವತವಲ್ಲ.
                           
 

 

 

 

      ಈಗಿನ ಕಂಪ್ಯೂಟರ್ ಯುಗದ ಒಂದು ದುರಂತವೆಂದರೆ ಸಿನಿಮಾ ಶೈಲಿಯ ಪ್ರೀತಿಸುವಿಕೆ; ಹಿನ್ನಲೆ ಗೊತ್ತಿಲ್ಲದೆ ನೋಡಿದ ತಕ್ಷಣ ಪ್ರೀತಿಯ ಭಾವ ಮೂಡುವುದು, ಮುಖ ಪರಿಚಯವಿಲ್ಲದೆಯೇ ಫೋನಿನಲ್ಲಿ ಪ್ರೀತಿ ಧ್ವನಿಸುವುದು, ಇಂಟರ್ನೆಟ್‌ನಲ್ಲಿ ಪರಸ್ಪರ ಫೋಟೋ ನೋಡಿ ಪ್ರೀತಿಸುವಿಕೆ ಇವುಗಳೆಲ್ಲವನ್ನೂ ಕೂಡ ಪ್ರೀತಿ ಅಂದುಕೊಂಡಿದೆ ಯುವಜನತೆ. ಅವು ನಿಜವಾದ ಪ್ರೀತಿಯಲ್ಲ ದೈಹಿಕವಾದ ಆಕರ್ಷಣೆಯಷ್ಟೆ. ಇಂಥ ಆಕರ್ಷಣೆಗಳಿಗೆ ದೀರ್ಘ ಬಾಳಿಕೆಯಿಲ್ಲ ಎಂಬುವುದರನ್ನು ಅರಿತು ನಮ್ಮ ಪ್ರೀತಿ ಯಾವ ರೀತಿಯದ್ದು ಅನ್ನುವುದನ್ನು ಪ್ರೀತಿಸುವ ಮೊದಲೇ ಯೋಚಿಸುವುದು ಉತ್ತಮ. 

        ವೇದಾಂತದ ಪ್ರಕಾರವಾಗಿ ಹೇಳುವುದಾದರೆ ಏಳು ಜನುಮಗಳಲ್ಲಿ ನಮ್ಮೀ ಮಾನವ ಜನ್ಮ ಶ್ರೇಷ್ಠವಾದುದು. ಮತ್ತ್ಯಾಕೆ ಪ್ರೀತಿಯಲ್ಲಿ ಮಿಂದೆದ್ದ ನಿಮ್ಮ ಶರೀರಕ್ಕೆ ಪ್ರೀತಿ ಕೈಕೊಟ್ಟಿತೆಂಬ ಒಂದೇ ಒಂದು ಕಾರಣಕ್ಕಾಗಿ ಶಿಕ್ಷಿಸುವಿರಾ? ನೀವಿಬ್ಬರೂ ಪ್ರೀತಿಸಿದ್ದ ಕ್ಷಣಗಳನ್ನು ಆರಾಮವಾಗಿ ಕೂತು ಮೆಲುಕುಹಾಕಿ. ಆ ದಿನಗಳಲ್ಲಿ ಪ್ರೇಮಿಗಳಾಗಿದ್ದ ನೀವಿಬ್ಬರು -ಕಡಲತಡಿಯಲ್ಲಿ ಕೈ ಕೈ ಬೆಸೆದು ನಲಿದಿದ್ದು, ಜೊತೆಯಾಗಿ ಶಾಪಿಂಗ್ ಮಾಡಿದ್ದು, ಸಿನಿಮಾ ನೋಡಿದ್ದು, ಪಾರ್ಕಿನ ಕಲ್ಲುಬೆಂಚಿನಲ್ಲಿ ಕುಳಿತು ತಾಸುಗಟ್ಟಲೆ ಹರಟಿದ್ದು, ಪರಸ್ಪರ ಜೊಕ್ ಹೊಡೆದು ನಕ್ಕಿದ್ದ ಕ್ಷಣಗಳೂ ಸೇರಿರಬಹುದು. ಹಸಿರಾಗಿಯೇ ಅವೆಲ್ಲವನ್ನೂ ಒಮ್ಮೆ ನೆನಪಿಸಿಕೊಂಡು ಬಿಟ್ಟುಬಿಡಿ. ಪ್ರೀತಿಸುವಿಕೆ ಗುರುಕಲಿಸದ ವಿದ್ಯೆ ಎಂಬ ಮಾತಿದೆ. ಅದರಂತೆ ನೀವು ಪ್ರೀತಿಸಿದಿರಿ ಅದು ನಿಮ್ಮ ತಪ್ಪಲ್ಲ ಆದರೆ ನಮ್ಮ ಮುಂದಿನ ಭವಿಷ್ಯವನ್ನು ಚಿಂತಿಸದೆ ಸದಾ ಪ್ರೀತಿಯ ಚಿಂತೆಯಲ್ಲಿಯೇ ಕಾಲ ಕಳೆಯುವುದು ತಪ್ಪು. ಈ ಜಗತ್ತಿನಲ್ಲಿ ಯಾವ ರೀತಿಯಾಗಿ ಪವಾಡಗಳು ನಡೆಯಲ್ಪಡುತ್ತವೆಂದು ಯಾರೂ ಹೇಳಲು ಸಾಧ್ಯವಿಲ್ಲ. ನಿಮ್ಮ ಕಾಲಿನಲ್ಲಿ ನೀವು ನಿಂತಮೇಲೆ ಹಿಂದೆ ನೀವು ಪ್ರೀತಿಸಿದ್ದ ಅದೇ ಹುಡುಗ ಅಥವಾ ಹುಡುಗಿ ಸಿಕ್ಕಿ ನೀವಿಬ್ಬರೂ ಜೀವನ ಸಂಗಾತಿಗಳಾಗಲೂಬಹುದು ಯಾರು ಬಲ್ಲ…? ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರೀತಿಸಿದ್ದ ಅನುಭವಗಳು ಮುಂದೆ ನಿಮಗೆ ಸಿಗುವ ಬಾಳ ಸಂಗಾತಿಯ ಜೊತೆ ಅನ್ಯೋನ್ಯವಾಗಿ ನಡೆದುಕೊಳ್ಳಲು ಸಹಕಾರಿಯಾಗಬಹುದಲ್ಲವೇ.
     ನಾವು ದೈಹಿಕ ಮತ್ತು ಮಾನಸಿಕ ಆರೋಗ್ಯವಾಗಿದ್ದು, ಆರ್ಥಿಕವಾಗಿ ಸಬಲರಾಗಿದ್ದೇವೆಂದಾದರೆ ನಮಗೆ ಸರಿಹೊಂದುವವರನ್ನು ಪ್ರೀತಿಸಿ ಜೀವನ ಸಂಗಾತಿಯನ್ನಾಗಿಸಲು ಕಷ್ಟಪಡಬೇಕಾಗಿಲ್ಲ. ಹಾಗಾಗಿ ಮಿತ್ರರೇ ನಿಮ್ಮ ಸುಟ್ಟುಹೋದ ಪ್ರೀತಿಯನ್ನು ಯೋಚಿಸಿ ಕಣ್ಣೀರಿಡಬೇಡಿ. ಅದಾಗ್ಯೂ ನಿಮ್ಮಿಬ್ಬರ ಪ್ರೀತಿ -ಬಾಂಧವ್ಯದ ಕೊರತೆಯಿಂದ, ಆರ್ಥಿಕ ದೃಷ್ಟಿಯಿಂದ, ವಿದ್ಯಾರ್ಜನೆ ನೆಲೆಯಿಂದ, ಕೌಟುಂಬಿಕ ಕಾರಣಗಳಿಂದ, ವಯಸ್ಸಿನ ಅಂತರದಿಂದ ಹೀಗೆ ನಾನಾ ವಿಧದಿಂದಲಾಗಿ ಕೊನೆಗೊಂಡಿರಬಹುದು. ಆ ಕೊರತೆಯನ್ನು ನೀಗಿಸಲು ಮತ್ತು ಅದರಿಂದ ಹೇಗೆ ಮೇಲೆ ಬರಬಹುದೆಂದು ಸಮಯ ತೆಗೆದುಕೊಂಡು ಯೋಚನೆಮಾಡಿ. ನಿಮ್ಮ ಸುತ್ತಮುತ್ತಲಿರುವ ಹಿರಿಯರ ಬದುಕಿನಲ್ಲಿಯೂ ಜವ್ವನದಲ್ಲಿ ಮಾಡಿದ್ದ ರಸವತ್ತಾದ ಪ್ರೇಮ ಕಥೆಗಳಿರುತ್ತವೆ, ಒಮ್ಮೆ ಕೇಳಿ ನೋಡಿ. ಅವರೂ ಕೂಡ ಹರೆಯದಲ್ಲಿ ಇಂಥವುಗಳನ್ನೆಲ್ಲಾ ಮಾಡಿಬಿಟ್ಟು ಎದ್ದು ಬಂದವರೇ ಗಟ್ಟಿಗೆ ಸಂಸಾರ ಕಟ್ಟಿದವರೇ ತಾನೆ. ಇನ್ನೇಕೆ ಕಿರಿಯವರಾದ ನಮಗೆ ಮುರಿದುಬಿದ್ದ ಪ್ರೀತಿಯ ಬಗ್ಗೆ ಯೋಚನೆ.
                                                   
-ಅಕ್ಷಯ ಕಾಂತಬೈಲು

ಆಸೆಗೆ ಎನಿತು ಕೊನೆ?


- ಅಕ್ಷಯ ಕಾಂತಬೈಲು
ಒಮ್ಮೆ ನೆನಪಿಸಿಕೊಳ್ಳಿ. ನಾವೆಲ್ಲರೂ ಬಾಲ್ಯದಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಅಪ್ಪನ ಕೈಬೆರಳೊತ್ತುತ್ತಾ, ಅಮ್ಮನ ಸೆರಗ ಜಗ್ಗುತ್ತಾ ‘ನಂಗೆ ಅದು ತೆಗೆದುಕೊಡು… ಇದು ತೆಗೆದುಕೊಡು…’ ಎಂದು ಮಿಠಾಯಿ, ಆಟಿಕೆ ಅಥವಾ ಇನ್ನಾವುದೋ ಆಸೆಯಲ್ಲಿ ರಂಪ ಮಾಡಿ ಕೇಳಿರುತ್ತೇವೆ. ಆಸೆ ಬೇಡ ಎಂದವರಾರು? ಬೇಕು ಎಂದವರಾರು? ಅದು ರಕ್ತಗತವಾಗಿ ಬಂದಿರುವಂಥದ್ದು ಅಲ್ಲವೇ. ಹುಟ್ಟಿದ ಹಿಳ್ಳೆ ಕೂಡ ಬದುಕಿಗಾಗಿ ಆಸೆಯಿಂದ- ಅಮ್ಮನ ಮೊಲೆ ಚೀಪಿ, ಹಾಲು ಹೀರಿ ಹಸಿವು ನೀಗಿಸಿಕೊಳ್ಳುತ್ತೆ. ಹೀಗೆ ಚಿಕ್ಕಂದಿನಲ್ಲೇ ಬೇರುಬಿಡುವ ಆಸೆಯ ಆಯಸ್ಸು ತುಂಬಾ ದೀರ್ಘ. ನಾವು ಬೆಳೆದಂತೆಲ್ಲಾ ನಮಗೇ ಗೊತ್ತಿಲ್ಲದಂತೆ ಆಸೆಯೂ ಬೆಳೆಯುತ್ತಾ ಹೋಗುತ್ತಿರುತ್ತದೆ.
     ಹರೆಯದ ಕಲರ್ ಕಲರ್ ಆಸೆಗಳು ಯಾರಿಗೆ ಬಂದಿಲ್ಲ ಹೇಳಿ; ಶಾಂಪಿಂಗ್ ಹೋಗಿ ಚೆಂದದೊಂದು ಬಟ್ಟೆ ಕೊಳ್ಳುವುದು, ಹುಡುಗನಾದರೆ ಹುಡುಗಿಗೆ ಹಾಗೆಯೇ ಹುಡುಗಿಯಾದರೆ ಹುಡುಗನಿಗೆ ಲೈನು ಹೊಡೆಯುವುದು, ಸಿನಿಮಾ ನೋಡುವುದು, ವಾಹನದ ಮೇಲೆ ಸವಾರಿ ಹೋಗುವುದು ಆಹಾ! ಎಂತೆಂಥಾ ಭಯಂಕರ ಆಸೆಗಳು ಆವಾಗ. ಕೆಲವು ಬಾರಿ ಆಸೆಗಳೇ ಆಸಕ್ತಿಯಾಗಿರುತ್ತದೆ ಎಂಬುವುದು ಒಪ್ಪಿಕೊಳ್ಳಲೇಬೇಕಾದ ವಿಚಾರ. ನಮ್ಮ ಓದು ಒಂದು ಹಂತ ತಲುಪಿದಾಗ ಜಾಬಿನ ಆಸೆಗಾಗಿ ನಾವೆಷ್ಟು ತಲೆಕೆಡಿಸಿಕೊಂಡಿರುತ್ತೇವೆಂದು ಆ ದೇವನೇ ಬಲ್ಲ. ಇದು ಆಸೆಯ ತುತ್ತತುದಿಯೋ ಏನೋ… ಇಂಟರೆಸ್ಟಿಂಗ್ ವಿಷಯವೆಂದರೆ ಆಗಷ್ಟೇ ಅರೇಂಜ್ ಮದುವೆಯಾದ ನವದಂಪತಿಗಳು ಸಾಮಾನ್ಯವಾಗಿ ಮೊದಲು ಮಾತನಾಡುವುದು; ತಮ್ಮ ತಮ್ಮ ಆಸೆ ಆಸಕ್ತಿಗಳ ಬಗ್ಗೆಯೇ.

‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಮಹಾತ್ಮ ಅಂದರೂ ಆಸೆಯಿಲ್ಲದಿದ್ದರೆ ಅದೂ ದುಃಖಕ್ಕೆ ಮೂಲವಾದೀತು. ಜೀವನದ ಮೇಲಿನ ಆಸೆ ಕಳೆದು ಜಿಗುಪ್ಸೆಗೊಂಡು ಜೀವವನ್ನೇ ಕಳೆದುಕೊಳ್ಳುವವರನ್ನು, ಓಡಿ ಹೋಗುವವರನ್ನು ಯೋಚಿಸಿದರೆ ಸಂಕಟವಾಗುತ್ತೆ. ಆಯಸ್ಸು ಹಿರಿದಾದಂತೆಲ್ಲಾ ಆಸೆಯೆಂಬ ಬೆಟ್ಟಗಳು ಒಂದೊಂದಾಗಿ ಕರಗುತ್ತಾ ಬಂದು ಬಂದೂ ನೆಲಮಟ್ಟ ತಲುಪುವುದು ಪ್ರಕೃತಿ ನಿಯಮ ಬಿಡಿ.

          ಸಾಮಾನ್ಯವಾಗಿ ಹೇಳುವ ಮಾತು -ಆಸೆ ಮಾಡಿ ಕೆಟ್ಟ. ಈ ಮಾತು ಸತ್ಯ ಎನ್ನುವಂತೆ ರಾಜಕಾರಣಿಗಳು/ ಉನ್ನತ ಹುದ್ದೆಯಲ್ಲಿರುವ ಸಮಾಜದ ‘ದೊಡ’್ಡ ಮನುಷ್ಯರು ಭ್ರಷ್ಟಾಚಾರ, ಅಕ್ರಮ ಆಸ್ಥಿ ಗಳಿಕೆ ಮಾಡಿ ಸಿಕ್ಕಿಬಿದ್ದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬೇಕಾದಷ್ಟಿದೆ. ಮನುಷ್ಯನಿಗೆ ಆಸೆಗಳೇ ಬದುಕಾಗಬಾರದು. ಬದುಕಲು ಆಸೆಗಳು ಬೇಕು ಅಷ್ಟೆ, ಬದುಕಲು ಬೇಕಾಗಿರುವ ಆಸೆಗಳು ಯಾವ ನೆಲೆಯಲ್ಲಿದೆ -ಧನಾತ್ಮಕವೋ… ಋಣಾತ್ಮಕವೋ ಎಂದು ಯೋಚಿಸಬೇಕಾಗಿದೆ. ಒಂದಂತೂ ನಿಜ ನಮ್ಮ ಆಸೆಗಳಿಗೆ ಲಗಾಮು ಹಾಕದಿದ್ದರೆ; ಇಂದಿನ ಕಾಲದಲ್ಲಿ ಕಿಸೆ ಖಾಲಿಯಾದೀತು, ಸಂಸಾರ ಬಿರುಕುಬಿಟ್ಟೀತು, ಬೀದಿಗೆ ಬೀಳಬೇಕಾಗಬಹುದು ಜೋಕೆ! ಅದಕ್ಕೆ ದೊಡ್ಡೋರು ಹೇಳಿದ್ದು ‘ಹಾಸಿಗೆ ಇದ್ದಷ್ಟು ಮಾತ್ರವೇ ಕಾಲುಚಾಚು’, ‘ಅತಿ ಆಸೆ ಗತಿಗೇಡು’ ಎಂಬುವುದಾಗಿ.

Sunday, September 28, 2014

ಮನೆಯ ಮುದ್ದೆಗೆ ಬಿದ್ದ ಒಂದು ತೂತ
ಈಗತಾನೆ ಮುಗಿಯಿತು ಕುರುಕ್ಷೇತ್ರ. ಮನಸ್ಸುಬಿಚ್ಚಿ ನಿಮ್ಮ ಬಳಿ ಹೇಳುವೆ; ಜನಸಂಖ್ಯೆ ಏರುಹತ್ತಿದ ಈ ಕಾಲದಲ್ಲಿ ಒಂದು ಮನೆಗೆ ಇಬ್ಬರು ಮಕ್ಕಳು ಅಂದ ಹಾಗೆ ಒಂದು ಮನೆಗೆ ಒಬ್ಬ ಸಾಹಿತಿ ಸಾಕಪ್ಪ. ಉಳಿದವರು ಬೇರೆ ಯಾವುದೇ ಉದ್ಯೋಗದಲ್ಲಿ ತೊಡಗಿದರೆ ಪರವಾಗಿಲ್ಲ ಅವರನ್ನು ಡೈವರ್ಟ್ ಮಾಡದಿರಿ ದಯಮಾಡಿ. ಆದರೆ ನಮ್ಮ ಮನೆಯಲ್ಲಿ ದೇವರೇ.... ಅಮ್ಮ ನಾನು ಇಬ್ಬರೂ ಸಾಹಿತ್ಯ ಆರಾಧಕರು. ಸಿಕ್ಕಾಸಿಕ್ಕ ಸಮಯವೆಲ್ಲಾ ದನಿಗೂಡಿಗೆ ಆರಾಮಿಸಲೂ ಬಿಡದೆ ಕಾದಾಡುತ್ತೇವೆ. ಕಾದಾಟದಲ್ಲಿ ಸಾಹಿತ್ಯ, ಜನರಲ್ ನಾಲೆಡ್ಜು ಹಾಳು- ಮೂಳು ಎಲ್ಲಾ ಸಾದಾ ಗರಿಗರಿಯಾಗಿ ಮೇಲೇಳುತ್ತಿರುತ್ತವೆ, ಇಲ್ಲಿ ಯಾವುದೇ ವಿಚಾರಗಳಿಗೆ ಸಾವೆಂಬುವುದೇ ಇಲ್ಲ ಆ ವಿಚಾರ ಮುತ್ತಜ್ಜನ ಓಬಿರಾಯನ ಕಾಲದ್ದೇ ಇರಲಿ.  ಬಾಯಿ ಜಗಳದಲ್ಲಿ ಯಾರಿದ್ದು ಮೇಲುಗೈ ಎಂದರೆ ನನ್ನದೇ ಎಂದು ನಾನು, ನನ್ನದೇ ಎಂದು ಅವಳು ಒಟ್ಟಾರೆ  ಇಬ್ಬರೂ ಬಿಟ್ಟುಕೊಡಲು ತಯಾರಿಲ್ಲ, ಬಿಟ್ಟುಕೊಟ್ಟರೂ 'ನಿನ್ನ ನೋಡಿ ಪಾಪ ಅಂತ ಅನ್ನಿಸಿತು ಹೋಗು ಕನ್ನಡಿಲಿ ಮುಖ ನೋಡಿ ಬಾ...' ಎಂದು ಉರಿಸುವುದು. ಮಾತಿನ  ಮಾರಾಮರಿಯ ನಡುವೆ ಯಾರಾದರು ತೀರ್ಪುಗಾರರು  ಇದ್ದರೆ ಚೆಂದ. ನಂಗೊಮ್ಮೊಮ್ಮೆ ಅನಿಸುವುದುಂಟು ಬಾಯಿ ಬಡಿಯಲೆಂದೇ ಧರೆಗುರುಳಿ ಬಂದೆನೇನೋ... ಆಕೆಯದ್ದು ಬೇರೆ ಹಳೆಯ ತಲೆ ಒಮ್ಮೆ ಬಾಯಿ ಬಡಿಯುವಿಕೆ ಸ್ಟಾರ್ಟ್ ಆಯಿತು ಅಂತಾದರೆ ಸುಖಾಸುಮ್ಮನೆ ಎಲ್ಲೆಲ್ಲಾ ಹತ್ತಿಸಿಕೊಂಡು ಮೂಲೆಯಲ್ಲಿ ಬಾಯಿಮುಚ್ಚಿ, ತುಟಿಯೊತ್ತಿ ಇದ್ದ ನನ್ನ ಮೇಲೆ ಡ್ರೈವ್ ಮಾಡೋದ್ರಲ್ಲಿ ಏನು ಪಡೆಯುತ್ತಾಳೋ ಈ ತಾಯಿ.... ನಾನು ಮೊಬೈಲು ತೆಗೆಯಲಾರೆ ಎನ್ನುತ್ತಲೇ ಸುಮಾರು ೫ ವರ್ಷಗಳ ಕೆಳಗೆ ಮೊಬೈಲು ಖರೀದಿಸಿದಳು. ಲ್ಯಾಪುಟಾಪು ತೆಗೆದರೆ ಕಣ್ಣು ಹಾಳು ಎಂದಾಕೆ ಅದನ್ನೂ ಖರೀದಿಸಿ ತದ ವರುಷಗಳ ನಂತರ ಕನ್ನಡಕ ಧಾರಿಣಿಯೂ ಆದಳು!.


'ನಂಗೆ ಅದು ಬೇಡ ಇದು ಬೇಡ ಎಂದು  ಎಲ್ಲವನ್ನೂ ಮಾಡುತ್ತೀಯ  ಅಮ್ಮ.... ಹಾಗಾದರೆ ನಂಗೆ ಬೇಕು ಅನ್ನೋದು ಮಾಡಲು ಬಿಡು'  ಈ ರೀತಿ ನನ್ನ ಮಾತು ಸ್ಟ್ರಾಂಗು ಕೀ ಪಾಂಯಿಟ್ ಹಿಡಿದು ಶುರುವಿಟ್ಟರೆ

'ನಿಂಗೆ ಏನು ಬೇಕಾದರು ಮಾಡಲು ಬಿಟ್ಟಿದ್ದೇ ಜಾಸ್ತಿ ಆಗಿದ್ದು' ಆಕೆ.
'ಏನು ಬೇಕಾದರೂ ಅಂದ್ರೆ.... ನಾನು ಬೇಡವಾಗಿದ್ದು ಏನು ಮಾಡಿರುವೆ?'
'ಮಾಡಿರುವೆಯಲ್ಲಾ ಅಮ್ಮನಿಗೇ ಎದುರು ಮಾತನಾಡುತ್ತಿರುವುದು ನೋಡು ಈಗ '

'ನಂಗೆ 'ಅಮ್ಮ' ಅನ್ನುವುದು ಪದವಷ್ಟೇ... ನೀನು ಹೆತ್ತಿದ  ಪ್ರೀತಿಯ ಕುಡಿಯಷ್ಟೆ!  ಮುಂದೆ ನೀನು ಹೇಳುವ  ಹಿಸ್ಟರಿ, ಪುರಾಣ, ಪುರಾವೆ ನಂಗೆ ಬೇಡ ಆಮೇಲೆ 'ಅಮ್ಮ' ಅನ್ನುವುದಕ್ಕೆ ನಿನ್ನ ಮೇಲೆ ಪ್ರೀತಿ ಇಲ್ಲ ಎಂದು ಭಾವಿಸುದೂ ಬೇಡ' ಹೌದು ನೀವು ಯೋಚಿಸಿದಂತೆ ನನ್ನದು ಮಾತಿನ ಟ್ರ್ಯಾಕ್ ತಪ್ಪಿತ್ತು....

ಕೇವಲ ಅಮ್ಮನ  ಜೊತೆಯಷ್ಟೇ ಅಲ್ಲ...  ಎಷ್ಟೇ ನಾಜೂಕಾಗಿ ಮಾತುಕತೆ ನಡೆಸಿದರೂ ಕೊನೆಗೆ ನನ್ನ ಮಾತು ಸರಿಕಂಡಿಲ್ಲವೆಂದಾದರೆ ತುಂಬಾ ಪಶ್ಚಾತಾಪ ಪಟ್ಟುಕೊಳ್ಳುವೆ. ಈ ಲೇಖನ ಬರೆದಾಗಲು ಅನ್ನಿಸುತ್ತಿದೆ ಮಾತಿನ ಮಾರಾಮರಿಯಲ್ಲಿ ನಾನು ಹಾಗೆ ಮಾತನಾಡಬಾರದಾಗಿತ್ತು ಛೆ...! ಇದು  ಮನೆಯ ಮುದ್ದೆಗೆ ಬಿದ್ದ ಒಂದು ತೂತಷ್ಟೆ... ಎಂದುಕೊಂಡಿದ್ದೇನೆ.
   

Saturday, September 13, 2014

ನಂಗೊಪ್ಪುವ ನಾಮಕರಣ ಮಾಡಿ

ನನ್ನ ಗೆಳೆಯ ಹೇಳಲೇಬೇಕಾದಷ್ಟು ಪ್ರತಿಭಾನ್ವಿತ. ನಂಗೊತ್ತು ನಾವಿಬ್ಬರೂ ಏಕಾಂತಕ್ಕೆ ಹೋಗುವುದು -ನಮಗೆ ನಿಲುಕದಷ್ಟು ಹೆಸರು ಬಾರದಿರುವಾಗ. 'ಅಲ್ಲ ಕಣೋ... ನಾನು ಓದಿನ ಜೊತೆಗೆ ಹೆಂಗೋ ಸಾವರಿಸಿಕೊಂಡು ರಂಗಕಲೆ ಕಲಿತು ರಾಷ್ಟ್ರೀಯ ನಾಟಕ ಶಾಲೆಯಲ್ಲಿ(ಎನ್.ಎಸ್.ಡಿ) ಅವಕಾಶ  ಗಿಟ್ಟಿಸಿಕೊಂಡರೂ  ನಂಗೆ ಹೆಸರು ಬಂದಿಲ್ಲ. ಇವಾಗ ಸ್ವಂತ ನಾಟಕ ತಂಡ ಬೆನ್ನಿಗಿಟ್ಟುಕೊಂಡರೂ  ಬೀದಿನಾಟಕ ಮಾಡೋ ಪರಿಸ್ಥಿತಿ!' ಗೆಳೆಯನ ಮಾತು ನನಗೂ ಕೆಲವೊಂದು ವಿಚಾರಗಳಲ್ಲಿ ಸಮೀಪ ಅನ್ನಿಸಿ ಆರ್ದ್ರಗೊಂಡಿದ್ದೆ. ಹೀಗೆ ನಮ್ಮ- ನಿಮ್ಮಗಳ ನಡುವೆ  ಇರುವ ಮುಸುಕುಪ್ರತಿಭೆಗಳು ಅವೆಷ್ಟು. ದೇವರ ಸೃಷ್ಟಿಯ ಜೀವದ ಗಂಟುಗಳಿಗೆ ಹೀಗಾದರೆ, ನಮ್ಮ ಮೈಮನ ತಣಿಸುವ ಪ್ರಾಕೃತಿಕ  ವಸ್ತುವಾಗಲಿ, ಧೂಳು ಹಿಡಿಸಿಕೊಂಡ ಮನುಷ್ಯಸೃಷ್ಟಿಯ ವಸ್ತುಗಳಾಗಲಿ -ಅವೆಷ್ಟು ಕೊರಗಬೇಡ ಹೇಳಿ. ಈ ವಿಚಾರದಲ್ಲಿ ಸಾಮ್ಯತೆಯಾಗಿ ಕಾಣಿಸಿದುದು ಜಲಪಾತಗಳು.

         
            ಗೊತ್ತಿರುವಂತೆ -ಜಲಲ ಜಲಲ ಜಲಧಾರೆ... ಗೀತೆ ಮೂಡಿಸಬಲ್ಲ ನಾಡಿನ ಜಲಪಾತಗಳೆಂದರೆ ನೆನಪಾಗುವುದು  ಜೋಗ, ಶಿವನ ಸಮುದ್ರ, ಅಬ್ಬೆ, ಚುಕ್ಕಿ ಫಾಲ್ಸ್ ಹೀಗೆ. ಚಾರಣದ ಗೀಳಿಟ್ಟುಕೊಂಡವರು ಕೊಲಂಬಾಸನಂತೆ  ಬೆಟ್ಟ-ಗುಡ್ಡ ಸುತ್ತುಹಾಕಿದರೆ ನಮ್ಮ ಕೊಡಗು ಜಿಲ್ಲೆಯಲ್ಲಿ ಸಿಗುವಷ್ಟು  ಅಡಗುಜಲಪಾತಗಳು  ಯಾವುದೇ ಜಿಲ್ಲೆಯಲ್ಲಿ ಸಿಗಲಾರೆದೆಂದು ನಿಸ್ಸಂಕೋಚವಾಗಿ ಛಾಲೆಂಜ್ ಮಾಡುವೆ!. ಕೊಡಗಿನಲ್ಲಿ ಕಾಣಬಹುದು ಛೋಟು ಜಲಧಾರೆಗಳು, ಪ್ರಾಕೃತಿಕ ಹಿನ್ನಲೆಯಲ್ಲಿ ಅದೊಂದು ಸೊಗಸು. ಕಾಣಬಹುದು ಬಾನಂಗಳದಿಂದ ಧರೆಗಿಳಿಯುವ ಜಲಧಾರೆಗಳು, ಇದೊಂದು ಸೊಗಸು. ನೋವೆಂದರೆ ಈ ಕಾಡುಜಲಪಾತಗಳ ಮೇಲೆ ಬೆಳಕು ಬೀಳದಿರುವುದು, ತನಗೊಂದು ಹೆಸರಿಲ್ಲದಿರುವಿಕೆ. ಆದರೆ ಇವು ಕೂಡ ಕಲ್ಲುಬಂಡೆಯ ಎದೆಯಲಿ ನೀರಧಾರೆಯನ್ನು ಹರಿಸಿ ತನ್ನ ವೀಕ್ಷಕರ ದೃಷ್ಟಿಗೆ; ಹೆಣ್ಣು ಅರೆ-ಬರೆ ಸಾರಿ ಉಟ್ಟಂತೆ, ಬಳುಕುವ ನಡುವಂತೆ, ಜಿಗಿಯುವ ಚಿಗರೆಯಂತೆ, ಓಡುವ ಕಾಲುಗಳಂತೆ ಇನ್ನೇನೋ ಅಂತೆ ಕಾಣಿಸಬಹುದು ಹಾಗೆ ನೋಡುವ  ಮನಸ್ಸಿರಬೇಕಷ್ಟೆ... ನನ್ನೂರಲ್ಲೂ ಹಲವು ನಿಗೂಢಜಲಪಾತಗಳಿವೆ. ಇವು ತಾನೂ ನಾಡಿನಲ್ಲಿ ಗುರುತಿಸಿಕೊಳ್ಳಬೇಕೆಂದು ಹಂಬಲಿಸುತ್ತಿವೆ...
ನಿನ್ನ ಹಂಬಲಿಕೆಗೊಂದು ಹನಿ ಕವಿತೆ;

ಬಾಗದಿರು ಡೊಂಕದಿರು
ಸುಮ್ಮನೆ ಹರಿದು
ಕೋರೆಬಂಡೆಗೆ
ಬೋಳುಬೆನ್ನೊಡ್ಡುವೆನೆಂದು
ನಿಜ ನೀನೊಂದು ಹೆಣ್ಣಾದರೆ
ಸೋಗಸಿಗೆ ಬಂಧಿ
ಇರುವ ನಗ್ನತೆಯಲ್ಲಿ ಸುಖಿಸು.

         
            ಕಾಂತಬೈಲು, ನಮ್ಮ ಮನೆಯ ಸುತ್ತಲೂ ರಕ್ಷಿತಾರಣ್ಯ. ಯಾರು ಈ ಜಲಪಾತದ ಇರುವಿಕೆಯನ್ನು ಸಂಶೋಧಿಸಿದರೋ ನಂಗೊತ್ತಿಲ್ಲ. ಮಡಿಕೇರಿಯಿಂದ ಸುಳ್ಯ ನಡುವೆ ಸಿಗುವ ಕಲ್ಲುಗುಂಡಿಯೆಂಬ ಚಿಕ್ಕ ಪಟ್ಟಣದಲ್ಲಿ ಚೆಂಬು ಗ್ರಾಮಕ್ಕೆ ತಿರುಗಿ ಕಾಂತಬೈಲು  ತಲುಪಿ.  ಹಳ್ಳಿರಸ್ತೆಯಿಂದ ಸುಮಾರಾಗಿ ಅರ್ಧ ಪರ್ಲಾಂಗು ಕಾಡಿನ ವಕ್ರ-ವಕ್ರ ಹಾದಿಯಾಗೆ ನಡೆಯಬೇಕು, ನಡೆಯಲ್ಲಿ ಆನೆ,  ಚುಕ್ಕಿ ಚಿರತೆ, ಕಾಡುಕೋಳಿ ಇನ್ನೂ ಕೆಲವು ಜೀವಗಳು  ನಿಮ್ಮನ್ನು ಇದಿರುಗೊಳ್ಳಬಹುದು ಹುಷಾರು!. ಮಳೆಗಾಲದ ಶುರು ಇಂಬಳ ಸಿಕ್ಕಾಪಟ್ಟೆ ಇರುತ್ತೆ ನೋಡಿ. ಹಾಗಾಗಿ ಮಳೆಕೊನೆಗೆ ಚಾರಣ ಮಾಡುವುದು ಸೂಕ್ತ. ನಿಸರ್ಗದೋಳಗೆ ಅಡಗಿರುವ ಕಾಂತಬೈಲಿನ ಈ ಫಾಲ್ಸ್ಗೆ ಇನ್ನೂ ನಾಮಕರಣವಾಗಿಲ್ಲ. ಬಂಡೆಯ ಮೇಲೆ ನೀರು ನಾಲ್ಕು ಕವಲುಗಳಾಗಿ ಧುಮ್ಮಿಕ್ಕುತ್ತದೆ. ಸುಮಾರಾಗಿ ೪೦ ಅಡಿಯ ಜಲಧಾರೆ. ಇಲ್ಲಿ ಯಾವುದೇ ಭಯವಿಲ್ಲದೆ ಜಲಕ್ರೀಡೆಯಾಡಬಹುದು. ಎಷ್ಟು ಬೇಕಾದರೂ ಚೀರಬಹುದು. ಕುಣಿದು-ಕುಪ್ಪಳಿಸಲೂಬಹುದು. 'ನಂಗೆ ಇನ್ನೂ ಹೆಸರು ಬಂದಿಲ್ಲ'ವೆಂಬ ಜಲಧಾರೆಯ ಕೂಗು ನಿಮಗೂ ಕೇಳಿಸಬಹುದು. ನಮ್ಮ ಮನೆಗೆ ಬಂದ ನೆಂಟರಾಗಲಿ, ಸ್ನೇಹಿತರೇ ಇರಲಿ ಮೊದಲು ಹೋಗುವುದೇ ಪಕ್ಕದಲ್ಲಿರುವ ಈ ಜಲಪಾತದ ಸುಖ-ದುಃಖ ವಿಚಾರಿಸಲು ಅವರಿಗೆ ಕಾಲದ ಲೆಕ್ಕವಿಲ್ಲ. ನೀರಾರಿ ಬೋಳುಬಂಡೆಗಲ್ಲ ನೋಡಿಯಾದರು ಖುಷಿ ಪಟ್ಟುಕೊಳ್ಳುತ್ತಾರೆ. ನನ್ನನ್ನು  ಡಾ. ರಹಮತ್ ತರೀಕೆರೆ, ಹಿರಿಯ ಸಾಹಿತಿ ಶಾಂತರಾಮ ಸೋಮಯಾಜಿ ಇನ್ನೂ ಹಲವು ಗಣ್ಯರು ನೋಡಬಂದಿರುವರೆಂದು ಜಲಧಾರೆ ಬಿಂಕದಿಂದ ಧ್ವನಿಸುತ್ತೆ. ಹೆಸರಿಲ್ಲದ ಕಾಂತಬೈಲಿನ ಝುರಿ, ನಿಮ್ಮ ಬರುವಿಕೆಯನ್ನು ಕಾಯುತ್ತಲಿದೆ... ಒಮ್ಮೆ ಬನ್ನಿ ನಂಗೊಪ್ಪುವ ನಾಮಕರಣ ಮಾಡಿ ಅನ್ನುತ್ತಿದೆ...


                                           ಜಲಪಾತಕ್ಕೆ ಕಲ್ಲುಗುಂಡಿ ಪೇಟೆಯಿಂದ ಡಾಂಬರು ಹಾದಿ.

                                           ಜಲಪಾತ ತಲುಪಲು ಅರ್ಧ ಕಿ.ಮೀ. ಕಾಡ ದಾರಿ.

ಕಾಂತಬೈಲಿನ ಅಡಗು ಜಲಪಾತದ ನೋಟ. 

Tuesday, September 9, 2014

ನನ್ನೂರಿನ ಕವಯಿ'ತ್ರಿ'ಯರು

ಮಡಿಕೇರಿ ತಾಲ್ಲೂಕಿನ ದೊಡ್ಡ ಗ್ರಾಮ 'ಚೆಂಬು'. ಬಹು ಕಲೆಗಳಿಂದ ತುಂಬಿದ ಚೆಂಬಿದು. ಕಲಾಪ್ರಕಾರ ಯಾವುದೇ ಇರಲಿ ಒಬ್ಬ ನಿದರ್ಶನ ಈ ಊರಲ್ಲಿ ಸಿಗುತ್ತಾರೆ.  ಯಕ್ಷಗಾನ, ನಾಟ್ಯ, ಸಂಗೀತ, ಜನಪದ ಕುಣಿತ, ಸಾಹಿತ್ಯ ಇಂತಿಪ್ಪ  ಕಲೆಗಳ ಉಸಿರಾಡುತ್ತಿದೆ ನನ್ನೂರು. ಸಾಹಿತಿಗಳರಸಿ ಊರು ಸುತ್ತೋಣ ಬನ್ನಿ- ಮೂವರೂ ಬರಹಗಾರ್ತಿಯರು ನನ್ನೂರಿಗೆ ಕೊಂಡುತಂದವರಾದರೂ ತಮ್ಮದೇ ಶೈಲಿಯ ಸಾಹಿತ್ಯದಿಂದ ಊರು ಕೊಂಡಾಡುತ್ತಿದೆ. ನಾಡಿನ ಹೆಸರಾಂತ  ಪತ್ರಿಕೆಗಳಲ್ಲಿ ಇವರುಗಳ ಹೆಸರುಗಳು ತಮ್ಮ ಬರಹದೊಂದಿಗೆ ನಮ್ಮೂರಿನ ಹೆಸರೂ ಅಚ್ಚಾಗುತ್ತಿದೆ. ಅವರನ್ನು, ಅವರ ಸಾಧನೆಯನ್ನು ನನ್ನಿಂದಾದಷ್ಟು ಪರಿಚಯಿಸುವ ಪುಟ್ಟ ಪ್ರಯತ್ನ ಇಲ್ಲಿದೆ.

ಸಹನಾ ಕಾಂತಬೈಲು: 'ಕಾಂತಬೈಲು' ಚೆಂಬುಗ್ರಾಮದ ಪುಟ್ಟ ಹಳ್ಳಿ ದಟ್ಟ ಹಸಿರಿನ ಸೊಬಗು ಇಲ್ಲಿ, ಇಲ್ಲಿನ ಸಹನಾರು  ತಮ್ಮ ಹನಿ ಕವಿತೆಯಿಂದ ಸಾಹಿತ್ಯಜೀವನ ಆರಂಭಿಸಿದವರು. ನಾನು ಕಂಡಹಾಗೆ  ಇವರ ಆದಿಯ  ಹನಿಗವನಳಲ್ಲಿ -ಮುಗ್ಧಪ್ರೀತಿ, ಏಕಾಂತತೆ, ವಿರಹ, ಪ್ರಣಯ ಎಲ್ಲವುದರ ಜೊತೆ ಪ್ರಾಸಬದ್ಧತೆ ವಿಶೇಷವಾದದ್ದು.
         
          ಕೇವಲ ಪಿ.ಯು.ಸಿಗೆ ಮುಗಿಸಿದ ಓದು. ತನ್ನ ೧೭ ನೇ ಕಿರು ವಯಸ್ಸಿಗೇ ಮದುವೆಯಾದವರು ಪುಟ್ಟ ಸಹನಾ. ೨೦ ನೇ ಹರೆಯದಲ್ಲೇ -ಮಂಗಳ, ಸುಧಾ, ತುಷಾರ, ಮಯೂರ, ಕರ್ಮವೀರ ದಲ್ಲಿ ಹನಿಗವಿತೆಗಳು ಪ್ರಕಟಿಸಲ್ಪಟ್ಟವು. ಚುಟುಕಿನಲ್ಲಿ ನಡೆದ ಹಾದಿಯಲ್ಲಿ ಇವರಿಗೆ ಸಿಕ್ಕ ಅತೀ ದೊಡ್ಡ ಪುರಸ್ಕಾರ ಕೇರಳದಲ್ಲಿ ನಡೆದ ಅಂತರಾಜ್ಯ ಮಟ್ಟದ  ಪ್ರತಿಷ್ಟಿತ'ಚುಟುಕು ಶ್ರೀ'  ಪ್ರಶಸ್ತಿ.  ತನ್ನ ಮನೆಯಲ್ಲಿ ಕರೆಂಟಿನ ಸವಲತ್ತು,  ವಾಹನ ಸವಲತ್ತು, ಸಂಸಾರದ ಹೊರೆ ಇವಗಳಾವು ಭಾದಿಸದೇ ತಾನಿರುವಿಕೆನ್ನೇ ಪ್ರೀತಿಸಿ ಎಂಟು ಕಿಲೋಮೀಟರು ಸವೆಸಿ ದೂರದ ಅಂಚೆ ಕಚೇರಿಗೆ  ಹೋಗಿ ಬರವಣಿಗೆ ಪೋಸ್ಟು ಮಾಡುತ್ತಿದ್ದಳು. ಹಳ್ಳಿಯೇ ಬೆನ್ನೆಲು ಎಂಬ ಪ್ರಗತಿಶೀಲ ಭಾರತದಲ್ಲಿ ಕಾಂತಬೈಲು ಹಳ್ಳಿಗೆ ಇನ್ನೂ ಬಸ್ಸು ಸವಲತ್ತಿಲ್ಲ. ಬಾಡಿಗೆ ಜೀಪಿನಲ್ಲಿ ಹೋಗಿ ಅದೇ ಎಂಟು ಕಿಲೋಮೀಟರ್ ಸವೆದು 'ನನ್ನಮ್ಮ'  ಸೈಬರಿಗೆ ಹೋಗಿ ಮೇಲ್ ಮಾಡುತ್ತಾಳೆ. ಹೇಳಿದಹಾಗೆ ಈ ಊರಿಗೆ ಮೊಬೈಲ್ ನೆಟ್ವರ್ಕ್ ಎಲ್ಲಾ ಕಡೆ ಚಾಚಿಲ್ಲ.  ಅರಣ್ಯ ಶೋಭೆಯ ಕೊಡಗಿನ  ಹಳ್ಳಿಗಳಲ್ಲಿ ಮರ ಬೀಳುವುದು ಸಾಮಾನ್ಯ ಹಾಗಂತ ನೆಲ ತೋಡಿ ಫೋನು ಕೇಬಲ್ ಹಾಕಬಹುದಿತ್ತು. ನೆಟ್ವರ್ಕ್ ಶಾಪ ಇರುವ ಈ ಊರಿಗೆ, ಸರಕಾರದಿಂದ ಪ್ರತೀ ಮನೆಗೂ ಹಾಕಿಸಿದ ತಂತಿರಹಿತ ವಿಲ್ ಫೋನು ಶೋಕೇಸಿನಲ್ಲಿ ಇಡಲು ಲಾಯಕ್ಕಾಗಿದೆ. ಅದಾವುದಕ್ಕೂ ಈಕೆ ಜಗ್ಗಿಲ್ಲ.

            ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಹಿಂದೆ ಶಿವಮೊಗ್ಗೆಯಲ್ಲಿ  ನಡೆದ ಸಮ್ಮೇಳನದಲ್ಲಿ ಭಾಗವಹಿಸಿರುವರು. ಕೃಷಿಯ ನೆಚ್ಚಿಕೊಂಡ ಮನೆ ತನ್ನದಾಗಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಒಲವಿತ್ತು ಮುಂದೆ ಕೃಷಿಲೇಖನವನ್ನೇ ತನ್ನ ಬರವಣಿಗೆಯಲ್ಲಿ ಬೆರೆಸಿದಳು ಸುಮಾರು ೬೦ಕ್ಕೂ ಮಿಕ್ಕಿ ಕೃಷಿಕ ಮಹಿಳೆಯರ ಯಶೋಗಾಥೆಯನ್ನು ಪ್ರಜಾವಾಣಿಯಲ್ಲಿ ಬರೆದಿರುವರು, ಇನ್ನೂ ಬರೆಯತ್ತಲೇ ಇರುವ ಈಕೆಯ ನಾಡುಕಂಡತಹ ಕೆಲವೇ ಕೆಲವು ಕೃಷಿಬರಹಗಾರ್ತಿಯಲ್ಲಿ ಒಬ್ಬಳು. ಪುಟ್ಟ ಹಳ್ಳಿಯಲ್ಲಿರುವ ಸಹನಾ ಕಾಂತಬೈಲು ಕರ್ನಾಟಕ ರಾಜ್ಯದಾದ್ಯಂತ ಹಲವಾರು ನೈಜ ಅಭಿಮಾನಿ ಬಳಗ  ಹೊಂದಿದ್ದಾರೆ. ಆದಿಯಲ್ಲಿ ಕವಯಿತ್ರಿಯಾಗಿದ್ದ ಸಹನಾ, ಇವರ ಕೃಷಿ ಲೇಖನಗಳಿಗೆ ಇಂದು ಸಹಜ ಬೇಡಿಕೆಗಳಿವೆ.

ಇವರ ಒಂದು ಹನಿಗವಿತೆಯ ಝಲಕ್

ಸಾಹಿತಿ ಆಗಬೇಕೆಂದು
ನನಗಿತ್ತು ಮಹದಾಸೆ
ಸಾ 'ಸ' ಆಗಿ
'ಹಿ' ಮಾಯವಾಗಿ
'ತಿ' ಉಳಿದು
ನಾನಾದದ್ದು ಸತಿ
ಸ್ಮಿತಾ ಅಮೃತರಾಜ್: ನಮ್ಮೂರಿನ ಶಿರ ಭಾಗದಲ್ಲಿರುವ, ಇಂದು ಕೊಡಗಿನ  ಸಾಹಿತ್ಯಸಮಾಜದಲ್ಲಿ ಕೇಳಿಬರುತ್ತಿರುವ ಹೆಸರು 'ಸ್ಮಿತಾ ಅಮೃತರಾಜ್'. ತಮ್ಮ ಸಣ್ಣ ವಯಸ್ಸಿಗೇ ಹಲವು ಹೆಸರಾಂತ ಪತ್ರಿಕೆಗಳಲ್ಲಿ ಕವಿತೆ ಮತ್ತು ಪ್ರಬಂಧಗಳು ಪ್ರಕಟವಾಗುತ್ತಿವೆ.

          ಮಡಿಕೇರಿಯಲ್ಲಿ ಮೊನ್ನೆ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಎರಡನೇಯ ಕವನ ಸಂಕಲನ 'ತುಟಿಯಂಚಿನಲ್ಲಿ ಉಲಿದ ಕವಿತೆಗಳು' ಬಿಡುಗಡೆಗೊಳಿಸಿರುವರು. ಇವರ ಮೊದಲ ಕವನ ಸಂಕಲನ -ಕಾಲ ಕಾಯುವುದಿಲ್ಲ. ಪ್ರಕೃತಿಯ ಬರ ನಮ್ಮೂರಿನಲ್ಲಿಲ್ಲದ ಕಾರಣ ಎಲ್ಲಾ ಇವರ ಕವಿತೆಗಳು ಪ್ರಾಕೃತಿಕ ಸೊಬಗಿನ ಜೊತೆ ಜೀವನದ ಆಗುಹೋಗುಗಳ ಸಮ್ಮಿಲನದ ಭರಪೂರ ಮಿಶ್ರಣ. ಕೃಷಿ ಅವಲಂಬನೆಯ ಮನೆಯ ಬಿಗು ವಾತಾವರಣದಲ್ಲಿ ಇವರು ಕತ್ತಿ ಹಿಡಿದು ಕೆಲಸ ಮಾಡುತ್ತಾರೆ. ನಾಡಿನ ಸಾಹಿತ್ಯ ಕುಡಿಯಾದ ಇವರು ಹುಲ್ಲು ಹೊರೆಯ ಮುಡಿಗಿಟ್ಟು ನಡೆಯುವ ಗರತಿ. ಕೊಡಗು ಜಿಲ್ಲೆಯ ಸಾಹಿತ್ಯ ಪರಿಷತ್ನಲ್ಲಿ ಇರುವ ಸ್ಮಿತಾ ಅಮೃತರಾಜ್ ಸಾಹಿತ್ಯವನ್ನೇ ತನ್ನ ಉಸಿರಾಗಿಸಿಕೊಂಡವರು. ನಾನು ಕಂಡಂತೆ ಇವರ ಪ್ರಬಂಧ ಬಾಲ್ಯದ ನೆನಪು, ಪರಿಸಿರ-ಪರಿಕರಗಳನ್ನು ಹೆಚ್ಚು ತೋರಿಸುತ್ತದೆ. ಇವರು ಭವಿಷ್ಯದಲ್ಲಿ  ನಾಡಿನ ಬಹುದೊಡ್ಡ ಸಾಹಿತಿಯಾಗುವುದರಲ್ಲಿ ಸಂಶಯವಿಲ್ಲ.

ಇವರ ಒಂದು ಕವಿತೆಯ ಕೊಂಡಿ

ಆಗಲೇ ಕಂಡಿದ್ದು
ಮಂಚದ ಅಂಚಿನಲ್ಲಿ
ಕಿಲುಬು ಹಿಡಿದು ಕುಳಿತ
ಕಂಚಿನ ದೀಪ

ಬೆಳ್ಳಗೆ ಉಜ್ಜೆ ಹೊಳಪೇರಿಸಿ
ನಡುಕೋಣೆಯಲ್ಲಿ ಕುಳ್ಳಿರಿಸಿದ್ದೇನೆ
ಕರೆಂಟು ಕೈ ಕೊಟ್ಟಾಗಲಾದರೂ ಬೆಳಕಿಗೆ
ಇಲ್ಲದಿದ್ದರೆ ಯಥಾ ಪ್ರಕಾರ ಶೋಕಿಗೆ


ಸಂಗೀತ ರವಿರಾಜ್: ನಮ್ಮೂರ ಹೃದಯ ಭಾಗದಲ್ಲಿರುವ ಇವರು ಉತ್ತಮ ಕವಯಿತ್ರಿ. 'ನನ್ನೊಡಲ ಮಿಹಿರ' ಇವರ ಮೊದಲ ಕವನ ಸಂಕಲನ. ಚಿಕ್ಕ ವಯಸ್ಸಿಗೆ ಪ್ರಭುದ್ಧ, ಮೇರು ಕವನಗಳನ್ನು ಬರೆಯುವ ಇವರು ನಮ್ಮ ಕೊಡಗು ಕಂಡಂತಹ ಸಾಹಿತಿ. ಹಲವು ಹೆಸರಾಂತ ಪತ್ರಿಕೆಗಳಲ್ಲಿ ಇವರು ಬರೆದ ಕವಿತೆಗಳು ಮೂಡಿವೆ. ನಾನು ಕಂಡಂತೆ ಕವಿತಾವಸ್ತು -ಜೀವನ, ಬೆಳವಣಿಗೆ ಜೊತೆ ಚಿಂತನೆಯ ಸಮ್ಮಿಲನ ಪ್ರತೀ ಕವತೆಗಳಲ್ಲಿ ವ್ಯಕ್ತವಾಗುತ್ತದೆ. ಮಡಿಕೇರಿಯಲ್ಲಿ ನಡೆದಂತಹ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದ ಹೆಮ್ಮೆ ಇವರದು. ಸಾಹಿತ್ಯದಲ್ಲಿ ಇವಾಗಲೇ ಬೆಳೆದಿರುವ ಇವರು ಮುಂದೆ ಉತ್ತಮ ಸಾಹಿತಿಯಾಗುವುದರಲ್ಲಿ ಎರಡು ಮಾತಿಲ್ಲ.

ಇವರ ಒಂದು ಕವಿತೆಯ ಕೊಂಡಿ

ಮನಸಿನೊಳಗಣ ಒದ್ದೆಗೆ
ತೀವ್ರವಾಗಿ ಬದುಕಿ ತೋರಿಸುತ್ತಿರುವ
ಅತ್ಯಂತ ಹೀನ ನೋವುಗಳ
ದಟ್ಟಡವಿಯು ಬಯಸುತ್ತಿದೆ
ಜಡಿಮಳೆಯ ಸೊಗಸು...
ನೋವ ತೇಯ್ದ ಹಂಬಲ,
ಬರಿದು ಭಾವದ ನೆಲ
ಮನಸ್ಸು ಮಣ್ಣಿನಂತೆ.                                                      ಸ್ಮಿತಾ ಅಮೃತರಾಜ್ ಮತ್ತು ನಾನು
 
                       

Tuesday, September 2, 2014

’ನಾನು’ ಅಂದ್ರೆ ಯಾರ್ಯಾರು ಗೊತ್ತಾ?


 
ಲಲಿತ ಪ್ರಬಂಧ
- ಅಕ್ಷಯ ಕಾಂತಬೈಲು
ಎಲ್ಲರು ಎಲ್ಲವೂ ಆಗಲು ಸಾಧ್ಯನಾ… ನಟ ಅಮೀರ್ ಖಾನನ ‘ತ್ರೀ ಈಡಿಯೇಟ್ಸ್’ ನ ಡಯಲಾಗ್ -’ಲತಾ ಮಂಗೇಶ್ಕರ್ ಕ್ರಿಕೇಟರ್ ಆಗಿದ್ರೆ… ಸಚಿನ್ ತೆಂಡೂಲ್ಕರ್ ಸಿಂಗರ್ ಆದ್ರೆ…’ ನಿಜ ಅಲ್ವ? ಈರ್ವರು ಏನಾಗಬೇಕೊ ಅದು ಆಗಿದ್ದಾರೆ.
‘ನಾನು’ ಒಂದು ಅಸ್ತಿತ್ವವನ್ನು ಸೂಚಿಸುತ್ತೆ. ಹಾಗೆಯೇ ‘ನಾನು’ ಸಾರ್ವತ್ರಿಕ, ಸಾರ್ವಕಾಲಿಕವಾಗಿ ಪ್ರಯೋಗಿಸುತ್ತೀವಿ. ನಾನು ಎಂಬುವುದರಲ್ಲಿ ನಾವಿದ್ದೇವೆ. ಹುಟ್ಟಿ ಕಣ್ತೆರೆದ ಪ್ರತಿಯೊಂದರಲ್ಲೂ ಪ್ರತಿಭೆ ಇದ್ದೇ ಇದೆ -ಮನುಷ್ಯ ಚಿಂತಿಸುತ್ತಾನೆ, ಜಲಚರ ಈಜತ್ತೆ, ಹಕ್ಕಿ ಹಾರುತ್ತೆ… ಗಮನಿಸಬೇಕು ನಮ್ಮನ್ನು ರೂಪಿಸಲು, ನಾನು ‘ಹೀಗೆಯೇ’ ಎಂದು ಕೆತ್ತಲು ಪರಿಸರ ಮತ್ತು ಸುತ್ತಲಿನ ಸಮೂಹದ ಪ್ರಭೆ ಧಾರಾಳವಾಗಿರುತ್ತೆ. ಜಾಗ, ಸ್ಥಾನ ಹೊರತು ‘ನಾನು’ ನಗಣ್ಯ. ನಾನೆಂಬುದು ಎಷ್ಟು ಜನರನ್ನು ಉದ್ಧರಿಸಿದೆ, ಎಷ್ಟು ಜನರನ್ನು ಉರುಳಿಸಿದೆ, ಎಷ್ಟು ಜನರನ್ನು ಅರೆಹುಚ್ಚನನ್ನಾಗಿಸಿದೆ, ಎಷ್ಟು ಜನರನ್ನು ಪೂತರ್ಿಹುಚ್ಚನನ್ನಾಗಿಸಿದೆ ಬದಲಾದವರಿಗೇ ಗೊತ್ತು! ಗಾಯಕ ಸೋನುನಿಗಂ, ಮಹಮ್ಮದ್ ರಫಿಯನ್ನ ಅನುಕರಿಸಿ ಅವರಿಂದ ‘ನಾನು’ಆದ. ಅಣ್ಣಾವ್ರ ಮೂರೂ ಮಕ್ಕಳು ‘ನಾನು’ವಿನಲ್ಲಿ ಅಪ್ಪ, ವರನಟ ರಾಜ್ಕುಮಾರರನ್ನು ಕಂಡರು. ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ ‘ಸುರಗಿ’ ಓದಬೇಕಾದರೆ ಹಾಗೆ ಅನ್ನಿಸಿತು. ಶಾಂತವೇರಿ ಗೋಪಾಲಗೌಡರು ಸೇರಿ ಹಲವು ಸ್ನೇಹಿತ ಬಂಧುಗಳು ಅವರನ್ನು ಸಮಾಜವಾದಿ ಚಿಂತನೆಗಳಿಗೆ ಓರೆ ಹಚ್ಚಿದ್ದರು. ಅವರೇ ಹೇಳುವಂತೆ -ನನ್ನನ್ನು ರೂಪಿಸಲು ಲೋಹಿಯಾ ಅವರೂ ಕಾರಣರು. ಅಂತರ್ಗಹಿಯಾಗಿ ಯೋಚಿಸಿದರೆ; ಅನಂತಮೂರ್ತಿ ಅವರನ್ನು ಸ್ನೇಹ ಸಮೂಹ ಪರಿಸರ ಬೆಳೆಸಿದ್ದೋ ಅಥವ ಅವರು ಬೆಳೆದದ್ದೋ… ಎಂದು ಕಾಡುತ್ತದೆ. ನನ್ನಪ್ಪ ಯಾವಾಗಲೂ ಹೇಳುತ್ತಿರುತ್ತಾರೆ -ಒಬ್ಬ ಸಜ್ಜನನಿಗೆ ಅಂತವರೇ ಸ್ನೇಹಿತರು, ರಾಸ್ಕಲ್ನಿಗೆ ಹಾಗಿರುವವನೇ ಗೆಳೆಯರು ಸಿಗುತ್ತಾರೆ. ಇದು ವೈಚಿತ್ರ್ಯ ಅಂದ್ರೆ.

ಸಾಕ್ಷರತೆಯ ಚೌಕಟ್ಟಿನಲ್ಲಿ ನೋಡಿದರೆ – ‘ನಾನು’ ಅನ್ನುವುದನ್ನು ಪರ್ಮನೆಂಟ್ ಆಗುವುದಕ್ಕೆ ನಾವು ಇಂಟರ್ಮೀಡಿಯೇಟ್ ಮುಂದೆ ಡಿಗ್ರಿ ಪೂರೈಸುತ್ತೇವೆ. ನನ್ನೊಬ್ಬ ಗೆಳೆಯ ಮನೆಯ ಆಥರ್ಿಕ ಪರಿಸ್ಥಿತಿ ಸೊರಗುತ್ತಿದ್ದಿದ್ದರಿಂದ ತನ್ನ ಐ.ಟಿ.ಐ ಕೋರ್ಸನ್ನು ಅರ್ಧಕ್ಕೇ ನಿಲ್ಲಿಸಿ ಸರಕಾರಿ ಸಂಸ್ಥೆಯೊಂದಕ್ಕೆ ಜಾಬಿಗೆ ಅಪ್ಲೈ ಮಾಡಿದ. ರೆಸ್ಯೂಮಿನಲ್ಲಿ ಡಿಗ್ರಿ ಪದವಿ ಅರ್ಧದಲ್ಲಿ ನಿಲ್ಲಿಸಿದ್ದನ್ನು ನಮೂದಿಸಿದ್ದರಿಂದ ಉದ್ಯೋಗಕ್ಕೆ ಸೇರಲಾಗಲಿಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶವಾದರೂ ಸರಕಾರಿ ಅರ್ಜಿಗಳಲ್ಲಾಗಲಿ, ಉದ್ಯೋಗದ ನಮೂನೆಯಲ್ಲಾಗಲಿ ‘ಕ್ಯಾಸ್ಟ್’ ಕಾಲಂ ಇದ್ದೆ ಇರುತ್ತೆ. ಅಂಬೆಡ್ಕರನ್ನು ನೆನೆಯಲು ಅವರ ಜಯಂತಿಯಲ್ಲಿ ಗಡದ್ದಾಗಿ ಭಾಷಣ ಬಿಗಿದರೆ ಅಲ್ಲಿಗೆ ಮುಗಿಯಿತೆಂಬ ಭಾವನೆ ರಾಜಕಾರಣಿಗಳಲ್ಲಿ. ಅವರು ‘ಕ್ಯಾಸ್ಟಿಸಂ’ ತೆಗದರಷ್ಟೇ ಅಂಬೆಡ್ಕರರವರಿಗೆ ಸಲ್ಲಿಸುವ ನೈಜ ಗೌರವ ಮತ್ತು ಪ್ರಜಾಪ್ರಭುತ್ವಕ್ಕೊಂದು ಅರ್ಥ, ದಲಿತವರ್ಗದ ‘ಅಸ್ತಿತ್ವ’. ನಾನು ಅನ್ನುವುದರಿಂದ ಅವೆಷ್ಟು ಶೋಷಣೆಗಳೂ, ಕಸಿಯುವಿಕೆ ನಡೆಯುತ್ತಿದೆ ಮತ್ತು ನಡೆದಿದ್ದು ಇತಿಹಾಸದಲ್ಲಿ ಸೇರಿಹೋಗಿರುವುದು ಆ ದೇವರೇ ಬಲ್ಲ. ಅಂತಮರ್ುಖಿ ದೃಷ್ಟಿಯಲ್ಲಿ ನಾನೆಂಬುದು ‘ಅಹಂ’. ಇದರ ನಿಗ್ರಹಿಕೆಯಲ್ಲಿ ಸಿದ್ದಾರ್ಥ -ಗೌತಮ ಬುದ್ಧನಾದ, ನರೇಂದ್ರನಾಥ -ಸ್ವಾಮಿ ವಿವೇಕಾನಂದರಾದರು, ಇನ್ನು ಹಲವರು ಸನ್ಯಾಸಿಗಳಾದರು. ಸಾಮಾನ್ಯವಾಗಿ ವಯಸ್ಸು ಮಾಗುತ್ತಿದ್ದ ಹಾಗೆ ನಾನು ಸಂಕುಚಿತಗೊಂಡು ಕೊನೆಗೆ ಶೂನ್ಯದಲ್ಲಿ ಲೀನವಾಗುತ್ತದೆ.
ಗೆಳೆತನದ ‘ನಾನು’ವಿನಲ್ಲಿ ‘ನಾವು’ಇರುತ್ತೆ. ಸಿಗರೇಟು ಸೇದುತ್ತಾ ಜನನಿಬಿಡತೆಯಲ್ಲಿ ವಾಕ್ ಮಾಡದರೆ ಸಾಕು. ಒಬ್ಬ ‘ಬಾಸ್ ಪೊಟ್ನ ಇದ್ಯಾ ಸಿಗರೇಟು ಹಚ್ಚಕೆ…’ ಅಂದ್ರೆ. ಇನ್ನೊಬ್ಬ ಅಸಾಮಿ ‘ಅಣ್ಣಾ ಒಂದು ಪಫ್ ಕೊಡ್ತಿರಾ…’ ಎಂದು ಗೋಗರೆಯತ್ತಾ ಕೇಳುವನು. ದೂರದಲ್ಲಿ ಒಬ್ಬನೇ ಹೊಗೆಯುಗುಳುತ್ತಾ ಇದ್ದ ಮಹಾಪುರುಷ -ನಂಗೊಬ್ಬ ಪಾರ್ಟ್ನರ್ ಸಿಕ್ದಾ ಎಂದು ಓಡೋಡಿ ಬಂದು, ಕೊನೆಗೆ ಸ್ನೇಹಿತನೇ ಆಗುತ್ತಾನೆ. ಇದೆಲ್ಲಾ ‘ಸೇಮ್ ಮೆಂಟಲಿಟಿ’ ಕೇಸು. ಜೀವನಸಂಗಾತಿಯನ್ನೂ ಆರಿಸಲು ಇಬ್ಬರಲ್ಲೂ ‘ಸೇಮ್ ಮೆಂಟಲಿಟಿ’ ಮ್ಯಾಚಿಂಗ್ ಆಗಬೇಕು. ಮ್ಯಾಚ್ ಆಗದೆ ಒಮ್ಮೊಮ್ಮೆ ಪುರೋಹಿತರ ಜಾತಕ ಭಾದಕ ಆಗುವುದು ಇಲ್ಲೆ, ಮುಂದೆ ಡೈವೋಸರ್್ ಏರುವುದೂ ಹೀಗೆಯೇ. ಈಗಿನ ಯುವಜನತೆ ತುಂಬಾ ಫಾಸ್ಟು ಬಿಡಿ. ನಮ್ಮದೆ ಹಿತ್ತಿಲಲ್ಲಿ ಮದ್ದು ಇದ್ದರೂ ತನಗೆ ಸರಿಹೊಂದುವ ಸಂಗಾತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹುಡಿಕಿ ಹಿಡಿಯುತ್ತಾರೆ. ಹೀಗೆ ಕಂಪ್ಯೂಟರ್ಯುಗದಲ್ಲಿ ನಾನು ‘ನಾವು’ಆಗಿ ಜಾಗತೀಕರಣಗೊಂಡಿದೆ!
ಸಿಂಪಲ್ಲಾದ ಎಕ್ಸ್ಪರಿಮೆಂಟು, ಒಂದು ಗಾಜಿನ ಲೋಟದಲ್ಲಿ ಅರ್ಧ ಭಾಗ ಶುಭ್ರ ನೀರು ತೆಗೆದುಕೊಳ್ಳಿ ಇನ್ನರ್ಧ ಭಾಗಕ್ಕೆ ಶುಭ್ರ ನೀರೆರೆಯಿರಿ. ಲೋಟ ತುಂಬಿದ ನೀರಲ್ಲೇನೂ ವ್ಯತ್ಯಾಸ ಅನ್ನಿಸದು. ಇವಾಗ ಅದೇ ಶುಭ್ರನೀರು ತುಂಬಿದ ಗಾಜಿನ ಲೋಟಕ್ಕೆ ಗೊಜ್ಜೆ ನೀರೆರೆಯಿರಿ ಬದಲಾವಣೆ ಗಮನಿಸಿ. ಶುಭ್ರನೀರು ಮತ್ತು ಗೊಜ್ಜೆನೀರು ಮಿಶ್ರಣವಾಗಿ ಡಯಲ್ಯೂಟಾದ ಹೊಸ ದ್ರಾವಣ ಸಿಗುತ್ತದೆ. ತಾತ್ಪರ್ಯವಿಷ್ಟೇ ‘ನಾನು’ ಎಂಬುವುದರಲ್ಲಿ ಇನ್ನೊಬ್ಬರ ನಾನು ಅಡಕವಾಗಿದೆ. ಅರಗಿಸಿಕೊಳ್ಳುವ ಮತ್ತು ಸೇರುವ ಗುಣ ನಮ್ಮಲ್ಲಿರಬೇಕು. ನಾವು ಎಲ್ಲಿ ಸೇರಬೇಕೋ… ಯಾರಿಗೆ ಸೇರಬೇಕೋ… ಅಲ್ಲಿಗೆ ಸೇರೋಣ.